ಪತ್ರಕರ್ತರು ಸಮಾಜದ ಶಿಕ್ಷಕರಿದ್ದಂತೆ: ಪ್ರಾಂಶುಪಾಲ ಡಾ. ಸತೀಶ್ಚಂದ್ರ ಅಭಿಮತ: ಬೆಳ್ತಂಗಡಿ ಪತ್ರಕರ್ತರ ಸಂಘದಿಂದ ಸಾಧಕರಿಗೆ ಗೌರವಾರ್ಪಣೆ

ಬೆಳ್ತಂಗಡಿ: ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಬಳಿಕ ಬರುವ ನಾಲ್ಕನೇ ಅಂಗವಾಗಿ ಪತ್ರಿಕೋದ್ಯಮ ಗುರಿತಿಸಿಕೊಂಡಿದೆ. ಸಾಮಾನ್ಯವಾಗಿ ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿ ಮಾಡುವ ಜವಾಬ್ದಾರಿಯನ್ನು ಶಿಕ್ಷಕರು ಮಾಡುತ್ತಾರೆ. ಅದೇ ರೀತಿ ನಾಗರೀಕ ಸಮಾಜದ ಓರೆ ಕೋರೆಗಳನ್ನು ತಿದ್ದುವ ಮೂಲಕ ಪತ್ರಕರ್ತರು ಸಮಾಜದ ಶಿಕ್ಷಕರಂತೆ ಗೋಚರಿಸುತ್ತಾರೆ ಎಂದು ಎಸ್.ಡಿ.ಎಂ. ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ಚಂದ್ರ ಅವರು ತಿಳಿಸಿದರು.
ಅವರು ಬೆಳ್ತಂಗಡಿಯಲ್ಲಿ ನಡೆದ ತಾಲೂಕು ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸಿ ಮಾತನಾಡಿದರು.
ಸಮಾಜಕ್ಕೆ ಪತ್ರಿಕಾ ರಂಗದ ಕೊಡುಗೆ ಅನನ್ಯವಾಗಿದ್ದು, ಪತ್ರಕರ್ತರು ನಿತ್ಯ ದೇಶಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಘದಿಂದ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಸಮಾಜಮುಖಿ ಕಾರ್ಯ ಮಾಡಲಾಗುತ್ತಿದ್ದು, ಮುಂದೆ ಇಂತಹಾ ಇನ್ನಷ್ಟು ಚಟುವಟಿಕೆಗಳು ನಡೆಯಬೇಕಿದೆ. ಇಲ್ಲಿ ಎಲ್ಲಾ ವಿಭಾಗಗಳ ಸಾಧಕರು ಇರುವುದು ಪುಟ್ಟ ಭಾರತೀಯ ಸಂಸ್ಕತಿಯನ್ನು ಕಣ್ತುಂಬಿಕೊಂಡಂತಾಗಿದೆ. ಕಾಲ ಎಷ್ಟೇ ಬದಲಾಗಬಹುದು ಆದರೆ ಮಾಡಿರುವ ಉತ್ತಮ ಕಾರ್ಯಗಳು ಸದಾ ಉತ್ತಮ ಕಾರ್ಯಗಳಾಗಿಯೇ ಉಳಿಯುತ್ತವೆ ಎಂದರು.


ಪ್ಲಾಸ್ಟಿಕ್ ಮುಕ್ತ ಗ್ರಾಮ ಘೋಷಣೆ:
ಗೌರವ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಪ್ರತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಮಾತನಾಡಿ, ಜಿಲ್ಲಾ ಪತ್ರಕರ್ತರ ಸಂಘದಿಂದ ರಾಜ್ಯದಲ್ಲೇ ಪ್ರಥಮ ಬಾರಿಗೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಸಲುವಾಗಿ ಗ್ರಾಮವಾಸ್ತವ್ಯ ಆಯೋಜಿಸಲಾಗಿತ್ತು, ಇದನ್ನು ಗಮನಿಸಿ ರಾಜ್ಯ ಶಿಕ್ಷಣ ಸಚಿವರೂ ಕರೆ ಮಾಡಿ ಸ್ಪಂದಿಸಿದ್ದರು. ಈ ಬಾರಿ ಮೂರನೇ ವರ್ಷದ ಗ್ರಾಮವಾಸ್ತವ್ಯ ಕಡಬದ ಸಿರಿಬಾಗಿಲು ಗ್ರಾಮದಲ್ಲಿ ನಡೆಯಲಿದೆ. ಅದೇ ರೀತಿ ಸುಳ್ಯದ ಮಡಪ್ಪಾಡಿ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಆದಷ್ಟು ಶೀಘ್ರ ಜಿಲ್ಲಾ ಸಂಘದಿಂದ ಘೋಷಿಸಲಾಗುವುದು. ಅಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಲಾಗುತ್ತಿದೆ. ಸಂಗ್ರಹಿಸಿದ ಪ್ರತಿ 100 ಗ್ರಾಂ. ಪ್ಲಾಸ್ಟಿಕ್ ಗೆ ಪ್ರತಿಯಾಗಿ 1 ಕೆ.ಜಿ. ಕುಚ್ಚಲು ಅಕ್ಕಿ ನೀಡಲಾಗುತ್ತಿದೆ. ಹೀಗೆ ಜಿಲ್ಲೆಯಲ್ಲೇ ಎಲ್ಲಾ ಗ್ರಾಮಗಳಲ್ಲಿ ಪ್ಲಾಸ್ಟಿಕ್ ಕುರಿತು ಅರಿವು ಮೂಡಿಸಿ, ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡುವ ಎಲ್ಲಾ ಯೊಚನೆಗಳೂ ಇವೆ. ಅದೇ ರೀತಿ  ದೃಷ್ಟಿ ಕಡಿಮೆ ಇರುವ ಬಡವರಿಗೆ ಸಹಾಯ ಮಾಡುವ ಸಲುವಾಗಿ ಕನ್ನಡಕ ಬ್ಯಾಂಕ್ ತೆರೆಯಲಾಗುವುದು. ಅಲ್ಲಿ ಬಳಸಿರುವ ಹಳೆ ಕನ್ನಡಕಗಳ ಫ್ರೇಂಗಳನ್ನು ಸಂಗ್ರಹಿಸಿ ಅಂಧತ್ವ ಇಲಾಖೆಗೆ ನೀಡಲಾಗುವುದು. ಅವರು ಅಗತ್ಯ ಇರುವವರಿಗೆ ಗಾಜು ಅಳವಡಿಸಿ ಬಡವರಿಗೆ ಕನ್ನಡಕ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು, ಇದಕ್ಕಾಗಿ ರೂಪುರೇಶೆ ಸಿದ್ಧಪಡಿಸಲಾಗಿದೆ ಎಂದರು.


ಎಲ್ಲೆಯನ್ನು ಮೀರಿ ಬೆಳೆಯಬೇಕು:
ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ರಾಷ್ಟ್ರಪ್ರಶಸ್ತಿ ವಿಜೇತ ಗಣಿತ ಶಿಕ್ಷಕ ಯಾಕೂಬ್ ಅವರು ಮಾತನಾಡಿ, ನಾವು ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡಿ ಏನಾದರೂ ಸಾಧನೆ ಮಾಡಿದಾಗ ಸಮಾಜ ಗುರುತಿಸುತ್ತದೆ. ಸಾಧನೆ ಮಾಡುವವನಿಗೆ ಸಮಾಜ ಗೌರವ ನೀಡುತ್ತದೆ. ಸಮಾಜಲ್ಲಿ ಸೇವೆ ಮಾಡುವಾಗ ಪರಿಧಿಯನ್ನು ಮೀರಿ ತನ್ನದು ಇಷ್ಟೇ ಕೆಲಸ, ಇಷ್ಟೇ ಮಾಡುತ್ತೇನೆ ಎಂದು ಯೋಚಿಸದೆ, ಈ ಎಲ್ಲೆಯನ್ನು ಮೀರಿ ಬೆಳೆದು ಸಮಾಜಕ್ಕಾಗಿ ಕಾರ್ಯನಿರ್ವಹಿಸಿದಾಗ ದೊಡ್ಡ ಮಟ್ಟದ ಗೌರವ ನಮ್ಮದಾಗುತ್ತದೆ. ಸಮಾಜದಲ್ಲಿ ಋಣಾತ್ಮಕ ಸುದ್ದಿಗಳು ಬಹು ಬೇಗ ಹರಿದಾಡುತ್ತವೆ, ಆದರೆ ತಾಲೂಕಿನ ಪತ್ರಕರ್ತರು ಸಮಾಜದ ಧನಾತ್ಮಕ ಅಂಶಗಳು ಸಾಧನೆಗಳನ್ನೇ ಹುಡುಕಿ ಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡುತ್ತಾರೆ. ನನಗೆ ಲಭಿಸಿರುವ ಗೌರವಕ್ಕೆ ಶಾಲೆಯ ವಿದ್ಯಾರ್ಥಿಗಳು ಕಾರಣ ಆದ್ದರಿಂದ ಈ ಗೌರವವನ್ನು ವಿದ್ಯಾರ್ಥಿಗಳಿಗೆ ಸಮರ್ಪಿಸುತ್ತೇನೆ ಎಂದರು.
ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ, ರಾಜ್ಯ ಪ್ರಶಸ್ತಿ ವಿಜೇತ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ನ ಕಾರ್ಯದರ್ಶಿ ಹಾಗೂ ಡಾ. ವೀರೇಂದ್ರ ಹೆಗ್ಗಡೆಯವರ ಆಪ್ತಕಾರ್ಯಕಾರ್ಯದರ್ಶಿ ವೀರುಶೆಟ್ಟಿ ಅವರು ಮಾತನಾಡಿ, ತಾಲೂಕು ಪತ್ರಕರ್ತರ ಸಂಘ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನಪರ ಕಾರ್ಯ ನಿರ್ವಹಿಸುತ್ತಿದೆ. ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಗ್ರಾಮವಾಸ್ತವ್ಯ ನಡೆಸಿ ಅಲ್ಲಿಗೆ ಸುಮ್ಮನಾಗದೆ, ಶಾಲೆಗೆ ಬೇಕಾದ ವ್ಯವಸ್ಥೆಗಳನ್ನು ಮಾಡುವ ಮೂಲಕ ಬದ್ಧತೆ ಮೆರೆದಿದೆ ಎಂದರು.
ರಾಷ್ಟ್ರ ಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಯಾಕೂಬ್ ಕೊಯ್ಯೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಶ್ರೀನಿವಾಸ ನಾಯಕ್ ಇಂದಾಜೆ, ವಿಶೇಷ ಪ್ರಬಂಧಕ್ಕಾಗಿ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿರುವ ಉಪನ್ಯಾಸಕ ಭಾಸ್ಕರ ಹೆಗಡೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈದ್ಯರಾದ ಡಾ. ವೇಣುಗೋಪಾಲ ಶರ್ಮಾ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಜಿನ್ನಪ್ಪ ಗೌಡ ಬೆಳಾಲು, ತುಳುನಾಡ ಕಂಬಳ ಓಟಗಾರನಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಹಕ್ಕೇರಿ, ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಧಮೋತ್ಥಾನ ಟ್ರಸ್ಟ್ (ರಿ) ಧರ್ಮಸ್ಥಳ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಸ್ತೂರ್ಬ ಸಂಜೀವಿನಿ ಸ್ವ ಸಹಾಯ ಸಂಘ ಬೆಳಾಲು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀರಕೇಸರಿ ಕನ್ಯಾಡಿ ಧರ್ಮಸ್ಥಳದ ಪ್ರತಿನಿಧಿಗಳನ್ನು ಗೌರವಿಸಲಾಯಿತು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿ ಕುಂಞ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ ಉಪಸ್ಥಿತರಿದ್ದರು.
ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಮನೋಹರ್ ಬಳಂಜ ಸ್ವಾಗತಿಸಿದರು. ದೀಪಕ್ ಅಠವಳೆ ನಿರೂಪಿಸಿದರು. ಗಣೇಶ್ ಶಿರ್ಲಾಲು ವಂದಿಸಿದರು.

error: Content is protected !!