ಬಾರ್ಯ: ಬೆಳ್ತಂಗಡಿ ತಾಲೂಕಿನ ಬಾರ್ಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ನ.23ರಂದು ಬೆಳಗ್ಗೆ ಚುನಾವಣೆ ನಡೆದಿದ್ದು, ಚುನಾವಣಾಧಿಕಾರಿ ಬೆಳಗ್ಗೆ ಚುನಾವಣಾ ಪ್ರಕ್ರಿಯೆ ನಡೆಸಿದ್ದಾರೆ. ಮಧ್ಯಾಹ್ನ ನೂತನ ಆಯ್ಕೆ ನಡೆದು ಸಂಭ್ರಮಾಚರಣೆಯೂ ನಡೆದಿದೆ. ಆದರೆ ಮಧ್ಯಾಹ್ನ ಬಳಿಕ ಚುನಾವಣಾಧಿಕಾರಿ ಮತ್ತೆ ಆಗಮಿಸಿದ್ದು, ಕೆಲವೇ ಸದಸ್ಯರ ಸಮ್ಮುಖದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಚುನಾವಣಾಧಿಕಾರಿ ರಾಜಕೀಯ ಪ್ರೇರಣೆಯಿಂದ ಇಂತಹಾ ಕೆಲಸ ಮಾಡಿದ್ದು, ಕಾನೂನು ಬಾಹಿರ ಕೆಲಸ ಮಾಡಿರುವ ಚುನಾವಣಾಧಿಕಾರಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಸದಸ್ಯ ಶಾಹುಲ್ ಹಮೀದ್ ಒತ್ತಾಯಿಸಿದರು.
ಅವರು ಬಾರ್ಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮುಂಭಾಗ ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸ್ಥಳೀಯ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದ ಕುರಿತೂ ಮಾಹಿತಿಗಳು ಹರಿದಾಡುತ್ತಿವೆ. ಈ ಅವ್ಯವಹಾರಗಳನ್ನು ಮುಚ್ಚಿಹಾಕಲು ಅಧ್ಯಕ್ಷರ ಬದಲಾವಣೆ ಮಾಡಲಾಗಿದೆ. ಅಸಂವಿಧಾನಿಕ ಆಯ್ಕೆಯ ಕುರಿತು ವಿಸ್ತೃತ ತನಿಖೆ ನಡೆಸಿ, ಘಟನೆಗೆ ಕಾರಣರಾದವರ ಕುರಿತು ಸೂಕ್ತ ತನಿಖೆ ನಡೆಸಿ, ಶಿಸ್ತು ಕ್ರಮಕೈಗೊಳ್ಳಬೇಕು ಎಂದರು.
ಸಹಕಾರಿ ಕ್ಷೇತ್ರದ ಗೌರವ ನಾಶ:
ಕಾಂಗ್ರೆಸ್ ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ದ.ಕ. ಜಿಲ್ಲೆಗೆ ವಿಶೇಷ ಘನತೆ ಇತ್ತು. ಆದರೆ ನ.23ರಂದು ಬಾರ್ಯದಲ್ಲಿ ನಡೆದ ಘಟನೆಯಿಂದ ಎಲ್ಲ ನಾಶವಾಗಿದೆ. ಕೇವಲ 3 ಗಂಟೆಗಳ ಅವಧಿಯಲ್ಲಿ ಯಾರಿಗೂ ತಿಳಿಯದಂತೆ ಅಧ್ಯಕ್ಷರ ಬದಲಾವಣೆ ಮಾಡಲಾಗಿದೆ. ನಿಯಮದಂತೆ ಒಮ್ಮೆ ಅಧ್ಯಕ್ಷರ ಆಯ್ಕೆ ನಡೆದ ಬಳಿಕ 6 ತಿಂಗಳುಗಳ ಕಾಲ ಯಾವುದೇ ಬದಲಾವಣೆ ಮಾಡುವಂತಿಲ್ಲ. ಅಂದರೆ ಕಾನೂನು ಬಾಹಿರವಾಗಿ ಈ ನಿರ್ಧಾರ ಕೈಗೊಂಡಿರುವುದರಿಂದ ಚುನಾವಣಾಧಿಕಾರಿಗಳು ಹಾಗೂ ಅವರಿಗೆ ಬದಲಾವಣೆ ಮಾಡಲು ಪ್ರೇರೇಪಣೆ ನೀಡಿ ಒತ್ತಡ ಹಾಕಿದವರನ್ನು ಬಂಧಿಸಬೇಕಿದೆ. ಸೊಸೈಟಿಯಲ್ಲಿ ನಡೆದಿರುವ ಅಕ್ರಮಗಳೂ ತನಿಖೆಯಿಂದ ಹೊರಗೆ ಬರಬೇಕಿದೆ ಎಂದರು.
ಹಣ ಡೆಪಾಸಿಟ್ ಮಾಡುವವರು ಯೋಚಿಸಿ!:
ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ಘಟಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ. ಗೌಡ ಮಾತನಾಡಿ, ಬಾರ್ಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಮಧ್ಯಾಹ್ನ ಬಳಿಕ ಅನೈತಿಕ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅದನ್ನು ರದ್ದುಗೊಳಿಸಬೇಕು. ಬೆಳಗ್ಗೆಯಿಂದ ಮಧ್ಯಾಹ್ನದೊಳಗೆ ನಡೆದ ಆಯ್ಕೆಯನ್ನು ಪರಿಗಣಿಸಬೇಕು. ಅಧ್ಯಕ್ಷರು ಯಾವುದೇ ಪಕ್ಷದವರಾಗಿರಲಿ ಆದರೆ ಅಕ್ರಮ ಆಯ್ಕೆ ಕಾನೂನು ಬಾಹಿರವಾಗಿದೆ. ಬಿಜೆಪಿಯಿಂದ ಇವಿಎಂ ಯಂತ್ರ ಹ್ಯಾಕ್ ಮಾಡಿದ್ದು ಆಯಿತು, ಕದ್ದದ್ದು ಆಯಿತು, ಈ ಬಾರಿ ಬಾರ್ಯದಲ್ಲಿ ಶಾಸಕರು ಚುನಾವಣಾಧಿಕಾರಿಯನ್ನೇ ಖರೀದಿ ಮಾಡುವ ಪ್ರಯತ್ನ ನಡೆಸಿದ್ದಾರೆ. ಹೀಗೇ ಮುಂದುವರಿದಲ್ಲಿ, ಮುಂದೆ ತಾಲೂಕಿನಲ್ಲಿ ನಡೆದುಕೊಂಡು ಹೋಗುವುದೂ ಕಷ್ಟ, ಯಾರನ್ನು ಬೇಕಾದರೂ ಲೂಟಿ ಮಾಡಲು ಪ್ರೇರಣೆ ನೀಡಿದರೂ ಅಚ್ಚರಿ ಪಡಬೇಕಿಲ್ಲ. ಈ ಬ್ಯಾಂಕ್‍ನಲ್ಲಿ ಕೊಟ್ಯಂತರ ರೂ. ಅವ್ಯವಹಾರ ನಡೆದಿದೆ, ಬೇನಾಮಿ ಹೆಸರಿನಲ್ಲಿ ಸಾಲ ನೀಡುವಂತಹಾ ಪ್ರಕರಣ ಇದನ್ನು ಮುಚ್ಚಿಹಾಕಲು ಅಧ್ಯಕ್ಷರನ್ನು ಬದಲಾವಣೆ ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಹರಿದಾಡುತ್ತಿದೆ, ಆದ್ದರಿಂದ ಈ ಬ್ಯಂಕ್‍ನಲ್ಲಿ ಹಣ ಇಡುವವರು ಒಂದು ಬಾರಿ ಯೋಚಿಸುವುದು ಉತ್ತಮ ಎಂದರು.
ಪಾರದರ್ಶಕವಾಗಿಲ್ಲ ಚುನಾವಣಾ ಪ್ರಕ್ರಿಯೆ:
ಇಳಂತಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ಮನೋಹರ್ ಕುಮಾರ್ ಮಾತನಾಡಿ, ಶಾಸಕರು ನ್ಯಾಯವಾದಿಗಳಾಗಿದ್ದು, ಕಾನೂನಿನ ಅರಿವು ಅವರಿಗಿದೆ. ಆದರೆ ಈ ಕಾನೂನು ಬಾಹಿರ ಆಯ್ಕೆ ಪ್ರಕ್ರಿಯೆಗೆ ಅವರೇ ಪರೋಕ್ಷ ಕುಮ್ಮಕ್ಕು ನೀಡಿದಂತೆ ಕಂಡುಬರುತ್ತಿದೆ. ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕಿತ್ತು, ಆದರೆ ಇಲ್ಲಿ ಚುನಾವಣಾ ಪ್ರಕ್ರಿಯೆಗೆ ಬೆಲೆಯೇ ಇಲ್ಲ ಎಂಬಂತಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಬೇಜವಾಬ್ದಾರಿ ವಹಿಸಿದ ಚುನಾವಣಾಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು. ಬ್ಯಾಂಕಿನವರೂ ಯಾವುದೇ ಪ್ರತಿಕ್ರೀಯೆ ನೀಡುತ್ತಿಲ್ಲ. ಕೂಡಲೇ ಸಿ.ಸಿ. ಕ್ಯಾಮರಾ ವಿಡಿಯೋ ಪರಿಶೀಲಿಸಿ ಶಿಸ್ತುಕ್ರಮ ಕೈಗೊಳ್ಳಬೇಕು ಎಂದರು.
ಬ್ಯಾಂಕ್ ಬಳಿ ಆಗಮಿಸಿದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಪ್ರವೀಣ್ ಬಿ. ನಾಯಕ್ ಅವರ ಬಳಿ ಪ್ರತಿಭಟನಾ ನಿರತರು ಅಹವಾಲು ಸಲ್ಲಿಸಿ, ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರವೀಣ್ ಬಿ. ನಾಯಕ್ ಅವರು ಚುನಾವಣಾ ಪ್ರಕ್ರಿಯೆ ಕುರಿತು ಚುನಾವಣಾಧಿಕಾರಿಗಳಿಂದ ಉತ್ತರ ಪಡೆದು, ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ತಣ್ಣೀರುಪಂತ ಗ್ರಾ.ಪಂ. ಮಾಜಿ ಅಧ್ಯಕ್ಷ ಜಯವಿಕ್ರಂ ಕಲ್ಲಾಪು, ಇಳಂತಿಲ ಗ್ರಾ.ಪಂ. ಅಧ್ಯಕ್ಷ ಯು.ಕೆ. ಇಸುಬು, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಉಷಾ ಶರತ್, ಗ್ರಾ.ಪಂ. ಮಾಜಿ ಅಧ್ಯಕ್ಷ ನವೀನ್ ರೈ, ತೆಕ್ಕಾರು ಸಿ.ಎ. ಬ್ಯಾಂಕ್ ಅಧ್ಯಕ್ಷ ಅಬ್ದುಲ್ ರಜಾಕ್, ಬೆಳ್ತಂಗಡಿ ನಗರ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಯೂಬ್, ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಪ್ರಧಾನ ಕಾರ್ಯದರ್ಶಿ ದಯಾನಂದ ಬೆಳಾಲು, ಪ್ರವೀಣ್, ಸ್ಥಳೀಯ ನಾಗರೀಕರು, ಬ್ಯಾಂಕ್ ಸದಸ್ಯರು ಉಪಸ್ಥಿತರಿದ್ದರು.