ನಿಡಿಗಲ್: ದರೋಡೆ ಯತ್ನ,‌ ನಾಲ್ವರು ಆರೋಪಿಗಳ ಬಂಧನ: ಎರಡು ಕಾರು ಸೇರಿ ₹8 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಂಜ ಗ್ರಾಮದ, ನಿಡಿಗಲ್ ಬಳಿ ದರೋಡೆ ಯತ್ನ ಪ್ರಕರಣ ನಡೆದಿದ್ದು, ಆರೋಪಗಳನ್ನು ಬಂಧಿಸಲಾಗಿದೆ.
ಮೇಲಾಧಿಕಾರಿಗಳ ಆದೇಶದಂತೆ ಸಿಪಿಐ ಬೆಳ್ತಂಗಡಿ ಮತ್ತು ಪಿಎಸ್‌ಐ ಧರ್ಮಸ್ಥಳ ಪೊಲೀಸ್ ಠಾಣೆ ಸಿಬ್ಬಂದಿಗಳನ್ನೊಳಗೊಂಡ ಎರಡು ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ ಒಟ್ಟು 8 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಎರಡು ಕಾರು, ತಲವಾರು, ಕಬ್ಬಿಣದ ರಾಡ್ ಹಾಗೂ ನಾಲ್ಕು ಮೊಬೈಲ್ ಸೇರಿವೆ.
ಆರೋಪಿಗಳಾದ ಬಂಟ್ವಾಳ ತಾಲೂಕು ಮೇಲ್ಕಾರ್ ಬಳಿ ಬಜಾಲ್ ಪಡ್ಪು ನಿವಾಸಿ ಪಿ. ಇರ್ಫಾನ್ (28) ವರ್ಷ, ಮಂಗಳೂರು ಅರ್ಕುಳ, ವಳಚ್ಚಿಲ್ ನಿವಾಸಿ ಮಹಮ್ಮದ್ ತೌಸೀಫ್ ಯಾನೆ ತಚ್ಚು (26) ವಶಕ್ಕೆ ಪಡೆದು ತನಿಖೆ ನಡೆಸಲಾಗಿದೆ. ಈ‌ ಇಬ್ಬರು ಆರೋಪಿಗಳು ನೀಡಿದ ಮಾಹಿತಿಯಂತೆ ಇತರ ಆರೋಪಿಗಳಾದ ಬೆಳಾಲು ಪರಾಳ ನಿವಾಸಿ, ಚಿದಾನಂದ ಗೌಡ(25) ಕಲ್ಮಂಜ, ಕಂದೂರು ನಿವಾಸಿ ಮೋಹನ (32) ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಕಲ್ಮಂಜ ಗ್ರಾಮದ ನಿಡಿಗಲ್ ಬಳಿ ಮನೆ ದರೋಡೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತನಿಖೆ ಸಂದರ್ಭ ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಹಮ್ಮದ್ ತೌಸೀಫ್ ಅಲಿಯಾಸ್ ತಚ್ಚು ಇದಕ್ಕೂ ಮೊದಲು ಅನೇಕ ಪ್ರಕಣಗಳಲ್ಲಿ ಭಾಗಿಯಾಗಿದ್ದು, ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿರುವುದು ಗಮನಕ್ಕೆ ಬಂದಿದೆ, ತನಿಖೆ ಮುಂದುವರಿದಿದೆ.
ಪ್ರಕರಣದ ಪತ್ತೆ ಕಾರ್ಯದಲ್ಲಿ  ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ. ಲಕ್ಷ್ಮೀ ಪ್ರಸಾದ್ ಐಪಿಎಸ್ ಮಾರ್ಗದರ್ಶನದಂತೆ, ಬಂಟ್ವಾಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ವೆಲೈಂಟೈನ್  ಡಿ ಸೋಜಾರವರ ನಿರ್ದೇಶನದಂತೆ, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಧರ್ಮಸ್ಥಳ ಠಾಣೆ ಪಿಎಸ್ಐಗಳಾದ ಪವನ್ ನಾಯಕ್ ಹಾಗೂ ಚಂದ್ರಶೇಖರ್ ಕೆ. ಕಾರ್ಯಾಚರಣೆ ನಡೆಸಿದರು. ತಂಡದಲ್ಲಿ ಸಿಬ್ಬಂದಿಗಳಾದ ತೋಮಸ್ ಇ.ಜಿ., ಬೆನ್ನಿಚ್ಚನ್, ವಿಶ್ವನಾಥ್ ನಾಯ್ಕ್, ವಿಜು ಎಂ.ಜಿ.,  ರಾಜೇಶ್ ಎನ್., ಪ್ರವೀಣ್  ಇಬ್ರಾಹಿಂ ಗರ್ಡಾಡಿ, ಅಬ್ದುಲ್ ಲತೀಫ್, ಪ್ರಮೋದ್ ನಾಯ್ಕ್, ಮಹಮ್ಮದ್ ಅಸ್ಲಾಂ, ರಾಹುಲ್ ಹಾಗೂ ಗಣಕ ಯಂತ್ರ ವಿಭಾಗದ ದಿವಾಕರ್, ಸಂಪತ್ ಇದ್ದರು.

error: Content is protected !!