ಒತ್ತಡ ದೂರಗೊಳಿಸಲು ಪ್ರಕೃತಿ ಚಿಕಿತ್ಸೆ ಸಹಕಾರಿ: ಹರ್ಷೇಂದ್ರ ಕುಮಾರ್: ಧರ್ಮಸ್ಥಳ ಶಾಂತಿವನದಲ್ಲಿ ಅನುವರ್ತನಾ ಚಿಕಿತ್ಸೆ ಘಟಕ ಉದ್ಘಾಟನೆ

ಬೆಳ್ತಂಗಡಿ: ಒತ್ತಡಗಳ ನಡುವೆ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಪ್ರಕೃತಿ ಚಿಕಿತ್ಸೆ ಉತ್ತಮ ಸಾಧನ. ಇಂದು ವಿಶ್ವದಾದ್ಯಂತ ಪ್ರಕೃತಿ ಚಿಕಿತ್ಸಾ ಪದ್ದತಿ ಬೆಳೆದಿದೆ. ಶಾಂತಿವನದಲ್ಲಿ 10 ಹಾಸಿಗೆಗಳೊಂದಿಗೆ ಆರಂಭವಾದ ಈ ವ್ಯವಸ್ಥೆ ಪ್ರಸ್ತುತ ದಿನದಲ್ಲಿ 320 ಹಾಸಿಗೆಗಳ ಕಟ್ಟಡ, ಎರಡು ಕ್ವಾಟೇಜ್, ನಾಲ್ಕು ಹಟ್ಟ್‌ಗಳು, ಉಡುಪಿ ಜಿಲ್ಲೆಯ ಪರೀಕದಲ್ಲಿ 400 ಹಾಸಿಗೆಗಳ ಕಟ್ಟಡ ಹಾಗೂ 10 ಜಿಲ್ಲೆಗಳಲ್ಲಿ ಹೊರರೋಗಿ ವಿಭಾಗಗಳಿದೆ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಶಾಂತಿವನ ಟ್ರಸ್ಟ್ ಟ್ರಸ್ಟಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.


ಅವರು ಸೋಮವಾರ ಧರ್ಮಸ್ಥಳ ಶಾಂತಿವನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ‘ಅನುವರ್ತನಾ ಚಿಕಿತ್ಸೆ ಘಟಕ’ವನ್ನು ಉದ್ಘಾಟಿಸಿ ಮಾತನಾಡಿದರು.
ಶಾಂತಿವನದಲ್ಲಿ ಚಿಕಿತ್ಸೆ ಪಡೆಯುವವರು ರೋಗಿಗಳಲ್ಲ, ಅವರು ಸಾಧಕರು. ಇಲ್ಲಿ ಚಿಕಿತ್ಸೆ ಪಡೆದವರು ಮರಳಿ ಪ್ರಕೃತಿಗೆ ಎಂಬ ದ್ಯೇಯವಾಕ್ಯದಂತೆ ಚಿಕಿತ್ಸೆ ಪಡೆದ ಬಳಿಕವೂ ಅದನ್ನೇ ಮುಂದುವರಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಧರ್ಮಾಧಿಕಾರಿ ಡಾ.ಹೆಗ್ಗಡೆಯವರ ಶಾಂತಿವನದ ಕನಸ್ಸನ್ನು ನನಸು ಮಾಡಿದವರು ವೈದ್ಯರುಗಳು, ಸಿಬ್ಬಂದಿಗಳು. ಅವರ ನಿಸ್ವಾರ್ಥ ಸೇವೆಯ ಫಲದಿಂದ ಸಾಧಕರು ಶ್ಲಾಘನೀಯ ಮಾತುಗಳನ್ನು ಆಡುತ್ತಿದ್ದಾರೆ ಎಂದರು.


ಕರ್ನಾಟಕ ಲೋಕಾಯುಕ್ತ ಜಿಲ್ಲಾ ನ್ಯಾಯಾಧೀಶ ಹೆಚ್.ಎ.ಮೋಹನ್ ಅವರು, ಪ್ರಸ್ತುತ ದಿನದಲ್ಲಿ ಪ್ರತಿಯೊಬ್ಬರೂ ಒತ್ತಡದಿಂದ ವೃತ್ತಿ ಮತ್ತು ವೈಯಕ್ತಿಕ ಜೀವನ ನಡೆಸಬೇಕಾಗಿರುವ ಸ್ಥಿತಿ ಬಂದಿದೆ. ಒತ್ತಡದ ಜೀವನದ ನಡುವೆಯೂ ಆರೋಗ್ಯವನ್ನು ಉಳಿಸಿಕೊಳ್ಳುವುದು ಮುಖ್ಯ. ಶಾಂತಿ, ನೆಮ್ಮದಿ, ತಾಳ್ಮೆ, ಸಹನೆ ರೂಡಿಸಿಕೊಳ್ಳಲು ಮತ್ತು ಇನ್ನಷ್ಟು ಕರ್ತವ್ಯಶೀಲತೆಯಿಂದ ಇರಲು ಪ್ರಕೃತಿ ಚಿಕಿತ್ಸೆ ಮುಖ್ಯವಾಗಿದೆ. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ರಾಷ್ಟ್ರ-ರಾಜ್ಯದ ಜನರಿಗೆ ಪ್ರಕೃತಿಯಿಂದ ಆರೋಗ್ಯವನ್ನು ಕಾಪಾಡಿಕೊಂಡು ಚಿಕಿತ್ಸೆ ನೀಡುವಂತಹ ಅತ್ಯುತ್ತಮವಾದ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಇಲ್ಲಿನ ವೈದ್ಯರ, ಸಿಬ್ಬಂದಿಗಳ ಸೇವೆ ಶ್ಲಾಘನೀಯ ಎಂದರು.

ಏನಿದು ಅನುವರ್ತನಾ ಚಿಕಿತ್ಸೆ:

ದೇಹದ ಭಾರವನ್ನು ಪೂರ್ಣವಾಗಿ ಹೊರುವ ಪಾದಗಳು ಒಂದು ಅಮೂಲ್ಯ ಅಂಗ. ಪ್ರಾಚೀನ ವೈದ್ಯ ಪದ್ದತಿಯಲ್ಲಂತೂ ಪಾದಗಳಿಗೆ ವಿಶೇಷ ಆರೈಕೆ ಮತ್ತು ದೇಹದ ವಿವಿಧ ಭಾಗಗಳಿಗೆ ಪಾದದ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಪಾದಗಳು ಇಡೀ ದೇಹದ ಅಂಗಗಳಿಗೆ ಶಾರೀರಿಕ ಹಾಗೂ ಮಾನಸಿಕ ಅಥವಾ ನರತಂತುಗಳ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಹೊಂದಿದೆ. ಪಾದಗಳಿಗೆ ಮಸಾಜ್ ಮಾಡುವ ಮೂಲಕ ದೇಹದ ಅಂಗಗಳಿಗೆ ಪೋಷಣೆ ನೀಡಬಹುದು. ಅನುವರ್ತನಾ ಚಿಕಿತ್ಸೆ ಎಂದು ಕರೆಯುವ ಈ ವಿದ್ಯೆಯ ಮೂಲಕ ಪಾದಗಳಿಗೆ ಸೂಕ್ತ ಮಸಾಜ್ ನೀಡಿ ದೇಹದ ಎಲ್ಲಾ ಅಂಗಾಂಗಳಿಗೆ ಹಾಗೂ ಮನಸ್ಸಿಗೆ ಮುದ ನೀಡಲು ಮತ್ತು ಒತ್ತಡದ ಮನಸ್ಸು ನಿರಾಳವಾಗಲು ಸಾಧ್ಯವಾಗುತ್ತದೆ.

ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಜಗನ್ನಾಥ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ಪ್ರಭಾರ ಪ್ರಿನ್ಸಿಪಾಲ್ ಡಾ.ಶಿವಪ್ರಸಾದ್ ಶೆಟ್ಟಿ, ವಿವಿಧ ವಿಭಾಗಗಳ ಡೀನ್‌ಗಳಾದ ಡಾ.ಗೀತಾ ಶೆಟ್ಟಿ, ಡಾ. ಸುಜಾತ ಉಪಸ್ಥಿತರಿದ್ದರು.
ಪ್ರಭಾರ ಮುಖ್ಯವೈದಾಧಿಕಾರಿ ಡಾ. ಶಶಿಕಿರಣ್ ಸ್ವಾಗತಿಸಿದರು. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ನಿರೂಪಿಸಿದರು.

error: Content is protected !!