ಅಂಗನವಾಡಿ ಕೇಂದ್ರ ಆವರಣದಲ್ಲಿ ಪೌಷ್ಠಿಕಾಂಶ ಬೆಳೆಗಳ ಮಾದರಿ ಕೈತೋಟ ರಚನೆಗೆ ಸಹಕಾರ: ಶಾಸಕ ಹರೀಶ್ ‌ಪೂಂಜ

ಬೆಳ್ತಂಗಡಿ: ಪ್ರೀತಿ, ವಿಶ್ವಾಸ ಹಾಗೂ ಶ್ರದ್ಧೆಯಿಂದ ಮಕ್ಕಳ ಲಾಲನೆ-ಪಾಲನೆಯ ಜೊತೆಗೆ ಪೋಷಣೆ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಊರಿನ ಎಲ್ಲ ಮಕ್ಕಳಿಗೂ ಪ್ರೀತಿಯ ಅಮ್ಮನಾಗಿದ್ದಾರೆ. ಅಂತಹ ಅಂಗನವಾಡಿ ಕಾರ್ಯಕರ್ತರು ಇನ್ನಷ್ಟು ಉತ್ಸಾಹದಿಂದ ಜವಾಬ್ದಾರಿ ನಿರ್ವಹಿಸಿ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವಂತಾಗಲು, ಆ ಮೂಲಕ ಎಲ್ಲ ಮಕ್ಕಳ ಪೌಷ್ಟಿಕತೆ ಕಡೆಗೆ ಗಮನ ಹರಿಸುವಂತಾಗಲು ಅವಕಾಶ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಕೇಂದ್ರ ಸರಕಾರದಿಂದ ಎಲ್ಲ ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಮೇಲ್ವಿಚಾರಕರಿಗೆ ಸ್ಮಾರ್ಟ್ ಫೋನ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಹೇಳಿದರು.

ಅವರು ನ. 23ರಂದು ಬೆಳ್ತಂಗಡಿ ಶ್ರೀ ಮಂಜುನಾಥಸ್ವಾಮಿ ಕಲಾಭವನದಲ್ಲಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಮೇಲ್ವಿಚಾರಕರಿಗೆ ಕೇಂದ್ರ ಸರಕಾರದ ಪ್ರಾಯೋಜಕತ್ವದಲ್ಲಿ ಸರಬರಾಜಾದ ಸ್ಮಾರ್ಟ್‌ಫೋನ್‌ಗಳನ್ನು ವಿತರಿಸಿ ಮಾತನಾಡಿದರು.

ಪೋಷಣೆ ಅಭಿಯಾನ ಯೋಜನೆಯಡಿ ಮಕ್ಕಳ ಮತ್ತು ಕಿಶೋರಿಯರ ಪೌಷ್ಠಿಕತೆಯನ್ನು ಹೆಚ್ಚಿಸುವ ಉದ್ಧೇಶದಿಂದ ಕೈಗೊಳ್ಳುವ ವಿವಿಧ ಕಾರ್ಯಕ್ರಮಗಳ ಭಾಗವಾದ ಅಂಗನವಾಡಿಗಳಲ್ಲಿ ಪೌಷ್ಠಿಕಾಂಶ ಬೆಳೆಗಳ ಕೈತೋಟ ರಚನೆಯಲ್ಲಿ ಕ್ಷೇತ್ರದ ಶಾಸಕನಾಗಿ ನಾನೂ ನಿಮ್ಮೊಡನೆ ಕೈಜೋಡಿಸುತ್ತೇನೆ ಎಂದ ಶಾಸಕ ಪೂಂಜಾ, ತಾಲೂಕಿನ 7ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ಒಂದು ಅಂಗನವಾಡಿ ಕೇಂದ್ರದಲ್ಲಿ ಪೌಷ್ಠಿಕಾಂಶ ಬೆಳೆಗಳ ಮಾದರಿ ಕೈತೋಟ ರಚನೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಈ ಅಂಗನವಾಡಿಗಳ ಆಯ್ಕೆ ಇಲಾಖೆಯ ಜವಾಬ್ದಾರಿ ಎಂದರು.

ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಸದನದಲ್ಲಿ ಮಾತನಾಡಿ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತೇನೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆಳ್ತಂಗಡಿ ತಾಲೂಕು ಪಂಚಾಯತ್ ಅಧ್ಯಕ್ಷೆ ದಿವ್ಯಜ್ಯೋತಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ದೈಹಿಕ ಹಾಗೂ ನೈತಿಕ ಬೆಳವಣಿಗೆಗೆ ಶ್ರಮಿಸುತ್ತಾರೆ. ಅವರ ಕೆಲಸ ಅಭಿನಂದನೀಯ ಇಂದು ದೊರೆತ ಸ್ಮಾರ್ಟ್‌ಫೋನ್ ಸದುಪಯೋಗವಾಗಿ ಪೋಷಣ್ ಅಭಿಯಾನದ ಯಶಸ್ಸಿನ ಜೊತೆಗೆ, ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುವಂತಾಗಲಿ ಎಂದು ಹಾರೈಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಸ್ಥಾಯಿ ಸಮಿತಿಯ ಅಧ್ಯಕ್ಷೆ ಮಮತಾ ಎಂ‌. ಶೆಟ್ಟಿ, ತಾಲೂಕು ಪಂಚಾಯತ್ ಉಪಾಧ್ಯಕ್ಷೆ ವೇದಾವತಿ, ಸದಸ್ಯ ಕೃಷ್ಣಯ್ಯ ಆಚಾರ್ಯ, ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಭಿವೃದ್ಧಿ ಅಧಿಕಾರಿ ಪ್ರಿಯಾ ಅ್ಯಗ್ನೇಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಿಯಾ ಆ್ಯಗ್ನೇಸ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಹಿರಿಯ ಮೇಲ್ವಿಚಾರಕಿ ಸುಲೋಚನಾ ವಂದಿಸಿದರು.

error: Content is protected !!