ಬೆಳ್ತಂಗಡಿ: ಅಳದಂಗಡಿ ಸೀಮೆಯ ಅರಸರಾದ ಅಜಿಲ ವಂಶದ ತಿಮ್ಮಣ್ಣರಸ ಡಾ.ಪದ್ಮಪ್ರಸಾದ್ ಅಜಿಲ ಅವರು ಪಟ್ಟಾಭಿಷೇಕಯುಕ್ತರಾಗಿ ಡಿ.1ಕ್ಕೆ 25 ವರ್ಷಗಳನ್ನು ಪೂರೈಸುತ್ತಿದ್ದಾರೆ. ಇದರ ಅಂಗವಾಗಿ ಅಳದಂಗಡಿಯ ಅರಮನೆ ಆವರಣದಲ್ಲಿ ರಜತ ಮಹೋತ್ಸವವನ್ನು ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗುವುದು. ಬಳಿಕ 2021ರಲ್ಲಿ ಕೊರೋನಾ ಕ್ರಮೇಣ ಕಡಿಮೆಯಾದಲ್ಲಿ ಅದ್ದೂರಿ ಸಮಾರೋಪ ಕಾರ್ಯಕ್ರಮ ಆಯೋಜಿಸುವ ಚಿಂತನೆ ಇದೆ ಎಂದು ಪಟ್ಟಾಭಿಷೇಕ ರಜತಮಹೋತ್ಸವ ಆಯೋಜನಾ ಸಮಿತಿ ಕಾರ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ತಿಳಿಸಿದರು.
ಅವರು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರತಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಡಿ. 1ರಂದು ಬೆಳಗ್ಗೆ ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ, ಬರಾಯ ಅರಮನೆಯಲ್ಲಿ ಹಿರಿಯರ ಸ್ಮೃತಿ ಹಾಗೂ ಧರ್ಮ ದೇವತೆಗಳ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ, ಪೂಜೆ, ಅಳದಂಗಡಿ ದೊಡ್ಡ ಬಸದಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಸರಿಯಾಗಿ ಪಟ್ಟದ ಉಯ್ಯಾಲೆಯಲ್ಲಿ ಅರಸರು ಆಸೀನರಾಗಿ ಸೀಮೆಯ ಪ್ರಮುಖರಿಂದ ಗೌರವ ಸ್ವೀಕರಿಸಲಿದ್ದಾರೆ. ಬಳಿಕ 8.30ಕ್ಕೆ ಸಾರ್ವಜನಿಕರಿಂದ ಗೌರವ ಸ್ವೀಕಾರ ನಡೆಯಲಿದೆ. ಇದೇ ಕಾರ್ಯಕ್ರಮದ ಅಂಗವಾಗಿ ಡಿ.22ರಂದು ಅರಸರ ಅರಮನೆಯಲ್ಲಿ ಧರ್ಮ ನೇಮೋತ್ಸವ ಹಮ್ಮಿಕೊಳ್ಳಲಾಗಿದೆ. ವರ್ಷದೊಳಗಾಗಿ ಅದ್ದೂರಿ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಕಾರ್ಯಾಧ್ಯಕ್ಷ ಶಶಿಕಿರಣ್ ಜೈನ್ , ಪ್ರಧಾನ ಕಾರ್ಯದರ್ಶಿ ಅಜಿತ್ ಎನ್. ನಾವರ, ಜತೆ ಕಾರ್ಯದರ್ಶಿ ಮಿತ್ರಸೇನ ಜೈನ್, ಸಂಚಾಲಕ ಶಿವಪ್ರಸಾದ್ ಅಜಿಲ, ಸಲಹೆಗಾರ ರಾಜಶೇಖರ ಶೆಟ್ಟಿ, ಉಪಾಧ್ಯಕ್ಷರಾದ ವಜ್ರಕುಮಾರ್ ಉಪ್ಪಿನಂಗಡಿ, ಗಂಗಾಧರ ಮಿತ್ತಮಾರು, ಜಗದೀಶ ಹೆಗ್ಡೆ ನಾವರ, ನಿತ್ಯಾನಂದ ಶೆಟ್ಟಿ ನೊಚ್ಚ, ಪ್ರವೀಣಕುಮಾರ್ ಇಂದ್ರ, ಪಿ.ಕೆ. ರಾಜು ಪೂಜಾರಿ, ಸುಭಾಶ್ವಂದ್ರ ರೈ, ಚಂದ್ರಶೇಖರ ಅಂತರ ಉಪಸ್ಥಿತರಿದ್ದರು.