ಜಿಲ್ಲೆ ಸಾಲ ಮರುಪಾವತಿಯಲ್ಲಿ ದೇಶಕ್ಕೇ ಮಾದರಿ: ರಾಜೇಂದ್ರ ಕುಮಾರ್

ಹೊಸಂಗಡಿ: ಸಹಕಾರಿ ಸಪ್ತಾಹದ ಮೂಲಕ ಎಲ್ಲಾ ಸಹಕಾರಿ ಸಂಸ್ಥೆಗಳನ್ನು ಬಲಪಡಿಸುವ ಕಾರ್ಯ ನಡೆಸಲಾಗುತ್ತಿದೆ. ಸಹಕಾರಿ ಕ್ಷೇತ್ರಗಳ ಮೂಲಕ ಮಹಿಳೆಯರೂ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಕೆ.ಎಂ.ಎಫ್. ಹಾಗೂ ಕ್ಯಾಂಪ್ಕೋ ಬಲಾಢ್ಯವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಅವಿಭಜಿತ ದ.ಕ ಜಿಲ್ಲೆ ಎಲ್ಲರ ಸಹಕಾರದಿಂದ ದೇಶದಲ್ಲೇ ಹೆಸರು ಗಳಿಸಿದೆ. ನಬಾರ್ಡ್‍ನಿಂದ ಜಿಲ್ಲಾ ಬ್ಯಾಂಕ್‍ಗೆ ನೇರ ಸಾಲ ಸೌಲಭ್ಯವೂ ಲಭಿಸಿದೆ. ಇದಕ್ಕೆ ರೈತರು ಕಾರಣ. ಪೂರ್ಣ ಪ್ರಮಾಣದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ದೇಶಕ್ಕೆ ಮಾದರಿಯಾಗುವಂತೆ ಮಾಡಿ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಸಹಕಾರ ಮಾರಾಟ ಮಹಾಮಂಡಳ ಮತ್ತು ಮಂಗಳೂರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.

 

ಅವರು ಹೊಸಂಗಡಿ ಗ್ರಾಮದ ಪೆರಿಂಜೆ ಸಂತೃಪ್ತಿ ಸಭಾಭವನದಲ್ಲಿ ರಾಜ್ಯ ಸಹಕಾರಿ ಮಹಾಮಂಡಲ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಬೆಳ್ತಂಗಡಿ ತಾಲೂಕು ಸಹಕಾರಿ ಯೂನಿಯನ್, ದ.ಕ. ಜಿಲ್ಲೆ ಸಹಕಾರ ಇಲಾಖೆ, ಬೆಳ್ತಂಗಡಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳು, ತಾಲೂಕು ಕೃಷಿ ಪತ್ತಿನ ಸಹಕಾರ ಸಂಘಗಗಳ ನೌಕರರ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ರೈತರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿರುವ ಪರಿಣಾಮ ಎಲ್ಲಾ ಸಹಕಾರಿ ಸಂಸ್ಥೆಗಳು ಲಾಭದಾಯಕವಾಗಿ ನಡೆಯುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಜನರಿಗೆ ಯಾವ ರೀತಿ ಉತ್ತಮವಾಗಿ ಸೇವೆ ನೀಡಬಹುದು ಎಂಬ ಚಿಂತನೆ ಅಗತ್ಯ. ಜನರಿಗಾಗಿ ಕೆಲಸ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು. ಸಹಕಾರಿ ಕ್ಷೇತ್ರದಲ್ಲಿ ಅವಕಾಶ ಸಿಕ್ಕಾಗ ಇನ್ನೊಬ್ಬರನ್ನೂ ಬೆಳೆಸುವ ಪರಿಪಾಠ ರೂಢಿಸಿಕೊಳ್ಳಬೇಕು. ಜನರ ನಂಬಿಕೆ, ವಿಶ್ವಾಸದಿಂದ ಸಂಸ್ಥೆ ಬೆಳೆದಿದ್ದು ಇದು ಇನ್ನೂ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕಿದೆ ಎಂದರು.

 

ಯುವ ಕೃಷಿಕರಿಗೆ ಸಹಾಯವಾಗಲಿ:
ಶಾಸಕ ಹರೀಶ್ ಪೂಂಜ ಮಾತನಾಡಿ, ಆತ್ಮನಿರ್ಭರ ಭಾರತದಡಿ ಕೃಷಿಯನ್ನು ನಂಬಿ ಜೀವನ ನಡೆಸುವ ಯುವಕರಿಗೆ ಸಹಾಯಧನದ ರೀತಿ ಸಾಲಸೌಲಭ್ಯ ಕಲ್ಪಿಸುವ ಸೌಲಭ್ಯ ದೊರೆತಲ್ಲಿ ಯುವಕರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರೆತಂತಾಗಿ, ಸಶಕ್ತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಸಹಕಾರ ಕ್ಷೇತ್ರ ಆರೋಗ್ಯ ರಕ್ಷಣೆಗೂ ಕ್ರಮ ಕೈಗೊಂಡಿರುವುದೂ ಉತ್ತಮ ಯೋಜನೆ. ಸಹಕಾರಿ ವ್ಯವಸ್ಥೆಯಲ್ಲಿ ಗ್ರಾಮೀಣ ಜನರಿಗೆ ಉಪಯೋಗ ಆಗುವ ಜೊತೆಗೆ ಉದ್ಯೋಗವೂ ಸೃಷ್ಟಿಗೂ ಸಹಕಾರಿಯಾಗಿದೆ. ನೆರೆ ಸಂದರ್ಭ ಸಹಕಾರಿ ಸಂಸ್ಥೆಗಳು ಕಾಳಜಿ ಫಂಡ್‍ಗೆ ದೇಣಿಗೆ ನೀಡಿದ್ದು, ಅವರಿಗೆ ಧನ್ಯವಾದಗಳು ಎಂದರು.
ಮಂಗಳೂರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಬಿ. ನಿರಂಜನ್ ಧ್ವಜಾರೋಹಣ ನೆರವೇರಿಸಿದರು. ಹೊಸಂಗಡಿ ಪದೋಳಿಯ ತಿರುಪತಿ ನವೋದಯ ಗುಂಪು ಹಾಗೂ ಬಡಕೋಡಿ ಮಹಮ್ಮಾಯಿ ನವೋದಯ ಗುಂಪುಗಳನ್ನು ಉದ್ಘಾಟಿಸಲಾಯಿತು. ಪೆರಿಂಜೆ ವಲಯ ಬಡಕೋಡಿ ದುರ್ಗಾಶ್ರೀ ನವೋದಯ ಗುಂಪಿನ ಪ್ರೇಮಾ ಅವರು ಆಕಸ್ಮಿಕ ನಿಧನ ಹೊಂದಿದ್ದು, ಚೈತನ್ಯ ವಿಮೆ ಮೂಲಕ ಮೃತರ ಪುತ್ರಿಗೆ 1 ಲಕ್ಷ ರೂ. ಪರಿಹಾರ ಧನ ವಿತರಿಸಲಾಯಿತು. ಡಿಸಿಸಿ ಬ್ಯಾಂಕ್ ಬೆಳ್ತಂಗಡಿ ಶಾಖೆಯ ನಡ ಗ್ರಾಮದ ಸಂಜೀವನ ನವೋದಯ ಗುಂಪಿನ ಅಬ್ದುಲ್ ನಾಸಿರ್ ಅವರ ಪತ್ನಿ ಮುಮ್ತಾಜ್ ಆಕಸ್ಮಿಕ ನಿಧನ ಹೊಂದಿದ್ದು, ಅಬ್ದುಲ್ ನಾಸಿರ್ ಅವರಿಗೆ 1ಲಕ್ಷ ರೂ. ಮೌಲ್ಯದ ಪರಿಹಾರಧನವನ್ನು ರಾಜೇಂದ್ರ ಕುಮಾರ್ ವಿತರಿಸಿದರು.
ಮಂಗಳೂರು ದ.ಕ.ಜಿಲ್ಲಾ ಕೇಂದ್ರ ಸಹಕಾರ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಾಲ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹರೀಶ್ ಪೂಂಜ, ಪೆರಿಂಜೆ ಪಡ್ಯಾರಬೆಟ್ಟು ಅನುವಂಶೀಯ ಆಡಳಿತರಾರರಾದ ಎ.ಜೀವಂಧರ ಕುಮಾರ್, ಮಂಗಳೂರು ದ.ಕ. ಜಿಲ್ಲಾ ಹಾಲು ಉತ್ಪಾದಕ ಒಕ್ಕೂಟದ ನಿರ್ದೇಶಕ ಪದ್ಮಣಾಭ ಅರ್ಕಜೆ, ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ತಾ.ಪಂ.ಸದಸ್ಯರಾದ ಓಬಯ್ಯ, ರೂಪಲತಾ, ದ.ಕ.ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ಪುತ್ತೂರು ವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಾಜು, ಬೆಳ್ತಂಗಡಿ ಸಹಕಾರ ಅಭಿವೃದ್ಧಿ ಅಧಿಕಾರಿ ಸುಕನ್ಯ ರಾವ್, ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರಾದ ವಸಂತ ಮಜಲು, ರಕ್ಷಿತ್ ಪಣೆಕ್ಕರ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ನ ಸ್ವಾಗತಿಸಿದರು. ಅಜಿತ್ ಕೊಕ್ರಾಡಿ ನಿರೂಪಿಸಿದರು. ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಶೇಖ್ ಲತೀಫ್ ವಂದಿಸಿದರು.

error: Content is protected !!