ಬೆಳ್ತಂಗಡಿ: ಕಿರ್ಲೋಸ್ಕರ್ ಸಂಸ್ಥೆ ಉತ್ಪಾದನಾ ಘಟಕ ಸ್ಥಗಿತಗೊಳಿಸಿದ ಪರಿಣಾಮ ಕಾರ್ಮಿಕರ ಉದ್ಯೋಗ ಅಸ್ಥಿತವಾಗಿತ್ತು. ಸಮಸ್ಯೆ ಶೀಘ್ರ ಪರಿಹರಿಸುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರಿಗೆ ಮನವಿ ಸಲ್ಲಿಸಿದ್ದರು. ಇದೀಗ ಲಾಕೌಟ್ ತೆರವಿಗೆ ಕಿರ್ಲೋಸ್ಕರ್ ಕಂಪನಿ ನಿರ್ಧರಿಸಿರುವುದು, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಸಂತಸ ತರಿಸಿದೆ.
ಪ್ರತಿಷ್ಠಿತ ಕಿರ್ಲೋಸ್ಕರ್ ಸಂಸ್ಥೆ ಉತ್ಪಾದನಾ ಘಟಕ ಸ್ಥಗಿತಗೊಳಿಸಿ, ಲಾಕೌಟ್ ಮಾಡಿದ ಪರಿಣಾಮ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದ ಕುರಿತು ಹಾಗೂ ಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಶಾಸಕ ಹರೀಶ್ ಪೂಂಜಾ ಉಪಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಿ, ಮನವಿ ಮಾಡಿದ್ದರು. ಈ ಕುರಿತು ನ.13ರಂದು ಪ್ರಜಾಪ್ರಕಾಶ ಸುದ್ದಿಯನ್ನು ಪ್ರಕಟಿಸಿತ್ತು. ಇದೀಗ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆ ಮತ್ತೆ ತೆರಯುವಂತೆ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರು ಸೂಚನೆ ನೀಡಿದ್ದಾರೆ. ಕಂಪೆನಿಯ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕಾರ್ಮಿಕರೂ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯನ್ನೂ ನಿಲ್ಲಿಸಬೇಕು. ಕಾರ್ಮಿಕರು ಕೆಲಸ ಮಾಡಲು ಸಂಸ್ಥೆ ಅನುವು ಮಾಡಿಕೊಡಬೇಕು ಎಂದು ಸಂಸ್ಥೆಗೆ ತಿಳಿಸಿದ್ದಾರೆ. ಲಾಕೌಟ್ ಹಾಗೂ ನೌಕರರ ಪ್ರತಿಭಟನೆ ವಿಚಾರವಾಗಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ನೇತೃತ್ವದಲ್ಲಿ ಸಂಧಾನ ಸಭೆ ನಡೆದಿತ್ತು.