ಬೆಳ್ತಂಗಡಿ: ರೋಟರಿ ಎನ್-ವಿಷನ್ ಹನಿಕೋಂಬ್ ಬೆಂಗಳೂರು, ವನ್ಯಜೀವಿ ಸಪ್ತಾಹದ ಅಂಗವಾಗಿ ಮೈಸೂರ್ ವಿಶ್ವವಿದ್ಯಾನಿಲಯ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಅಕ್ಟೋಬರ್‌ನಲ್ಲಿ ಹಮ್ಮಿಕೊಂಡ ಪ್ರಕೃತಿ ಮತ್ತು ವನ್ಯಜೀವಿ ಛಾಯಾಗ್ರಹಣ ಸ್ಪರ್ಧೆಗಳರೆಡರಲ್ಲೂ ಡಾ.ಅಶೋಕ್ ಕುಮಾರ್ ರವರು ಪ್ರಥಮ ಬಹುಮಾನ ಪಡೆದಿದ್ದಾರೆ.
ಮಣ್ಣಿನ ಗೂಡು ನಿರ್ಮಿಸಿ, ಮೊಟ್ಟೆ ಇಟ್ಟು, ಹೊರ ಬರಲಿರುವ ತನ್ನ ಮರಿಗಳಿಗೆ ಆಹಾರವಾಗಿ ಚಿಟ್ಟೆಯ ಮರಿಹುಳ (ಲಾರ್ವ) ವನ್ನು ಒಯ್ಯುತ್ತಿರುವ ಕಣಜ ಕೀಟದ ಛಾಯಾಚಿತ್ರವು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದ್ದು ನಗದು ಬಹುಮಾನ ಮತ್ತು ಪ್ರಮಾಣಪತ್ರಕ್ಕೆ ಆಯ್ಕೆಯಾಗಿರುತ್ತದೆ. ಹಣ್ಣು ತಿನ್ನುವ ಆತುರದಿಂದ ಹಾರಿಬರುತ್ತಿರುವ ಬಾವಲಿ ಚಿತ್ರವು ಗೌರವ ಪ್ರಶಸ್ತಿ ಪಡೆದಿರುತ್ತದೆ.
ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆದ ಇಂಡಿಯನ್ ಗೋಲ್ಡನ್ ಸರ್ಕಿಟ್ ಅಂತರ್ ರಾಷ್ಟ್ರೀಯ ಮಟ್ಟದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಪುತ್ತೂರು-ಜಾತ್ರೆಯ ಫೋಟೋ ಚೇರ್‌ಮನ್-ಆಯ್ಕೆ ಪ್ರಶಸ್ತಿಗೆ ಪಾತ್ರವಾಗಿದ್ದು, ಫೋಟೋಗ್ರಫಿ ಪಾಟಶಾಲಾ, ಯುನೀಕ್ ಇಮೇಜ್ ಹಾಗೂ ವಿವಿದ್ ಫೋಟೋಗ್ರಫಿ ವಿ.ಪಿ.ಯಸ್ ಸಲಾನ್ ರಾಷ್ಟ್ರೀಯ ಮಟ್ಟದ ಛಾಯಾಗ್ರಹಣ ಸ್ಪರ್ಧೆಗಳಲ್ಲೂ ಈ ಫೋಟೋ ಚಿನ್ನದ ಪದಕ ಗಳಿಸಿಕೊಂಡಿದೆ.
ಇತ್ತೀಚಗಷ್ಟೇ ಬಲ್ಗೇರಿಯಾ ದೇಶದಲ್ಲಿ ನಡೆದ ಸ್ಪರ್ಧೆ ಮತ್ತು ಲೆನ್ಸ್ & ವ್ಯೂ ಅಂತರ್ ರಾಷ್ಟ್ರೀಯಮಟ್ಟದ ಸ್ಪರ್ಧೆಗಳರೆಡರಲ್ಲೂ ಇವರು ಕ್ಲಿಕ್ಕಿಸಿದ ಬಾಹುಬಲಿ-ಮಸ್ತಕಾಭಿಶೇಕ ಛಾಯಾಚಿತ್ರಕ್ಕೆ ಸುವರ್ಣ ಹಾಗೂ ರಜತ ಪದಕ ಲಭಿಸಿದ್ದು ದಶಂಬರ್‌ನಲ್ಲಿ ಪ್ರದರ್ಶನಗೊಳ್ಳಲಿದೆ.
ಇಲೆಕ್ಟ್ರಾನಿಕ್ಸ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ಪದವಿ ಪಡೆದಿರುವ ಡಾ.ಅಶೋಕ್ ಕುಮಾರ್ ಅವರು ಉಜಿರೆಯ ಯಸ್. ಡಿ. ಯಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಸ್ತುತ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.