ಮಕ್ಕಳಂತೆ ಕುಣಿದ ಶಿಕ್ಷಕರು!: ಮಕ್ಕಳಿಗೆ ಶಾಲೆಯಿಂದ ಸರ್ಪೈಸ್!: ಮಕ್ಕಳ ದಿನಾಚರಣೆ ವಿಶೇಷ

 

ವಿಶೇಷ ವರದಿ:ಪ್ರಸಾದ್ ಶೆಟ್ಟಿ ಎಣಿಂಜೆ

ಬೆಳ್ತಂಗಡಿ: ಮಕ್ಕಳ ದಿನಾಚರಣೆಗಾಗಿ ಶಿಕ್ಷಕರೇ ಮಕ್ಕಳಂತೆ ಕ್ಯಾಮರಾ ಮುಂದೆ ಹೆಜ್ಜೆ ಹಾಕಿದರು. ಮಕ್ಕಳ ನಿಸ್ವಾರ್ಥ ಪ್ರೀತಿಗೆ, ಮಕ್ಕಳಿಗಾಗಿ, ಮಕ್ಕಳಂತೆ ಹಾಡಿ ಕುಣಿದು ತಮ್ಮ ವಿಶೇಷ ಸಂದೇಶ ನೀಡಿದ ಶಿಕ್ಷಕರ ಕಥೆಯಿದು. ಮಕ್ಕಳ ದಿನಾಚರಣೆ ಸಂದರ್ಭ ಮಕ್ಕಳಿಗಾಗಿ ಸರ್ಪೈಸ್ ನೀಡಿದ ಶಾಲೆಯ ಹಾಗೂ ಶಾಲಾ ಶಿಕ್ಷಕರ ಮಾಹಿತಿ ಪ್ರಜಾಪ್ರಕಾಶ ತಂಡದಿಂದ.

 

 

ದೇಶದಾದ್ಯಂತ ದೀಪಾವಳಿ ಸಂಭ್ರಮ ಮನೆಮಾಡಿದೆ. ಜೊತೆಗೆ ಮಕ್ಕಳ ದಿನಾಚರಣೆಯೂ ಇದೇ ದಿನ ಬಂದಿರುವುದು ಇನ್ನಷ್ಟು ಸಂತಸ ತಂದಿದೆ. ಆದರೆ ಮಕ್ಕಳನ್ನು ಪ್ರತಿದಿನ ಭೇಟಿ ಮಾಡುವುದು ಈ ಬಾರಿ ಇಲ್ಲದಂತಾಗಿದೆ. ಅದೇ ರೀತಿ ಮಕ್ಕಳಿಗೂ ತಮ್ಮ ಮೆಚ್ಚಿನ ಶಿಕ್ಷಕರನ್ನು ಭೇಟಿಯಾಗುವುದು ಕಷ್ಟಸಾಧ್ಯವಾಗಿದೆ. ಕೊರೋನಾ ಕಾರಣದಿಂದಾಗಿ ಆನ್‍ಲೈನ್ ಶಿಕ್ಷಣ ನಡೆಯುತ್ತಿದ್ದು, ಮಕ್ಕಳು ಮನೆಯಲ್ಲಿಯೇ ಇದ್ದು ಶಿಕ್ಷಕರನ್ನು ಮೊಬೈಲ್ ಮೂಲಕ ನೋಡುವುದು, ಶಿಕ್ಷಕರು ಶಾಲೆಗೆ ಆಗಮಿಸಿ ಆನ್‍ಲೈನ್ ತರಗತಿ ನಡೆಸುವಂತಾಗಿದೆ. ಮಕ್ಕಳ ದಿನಾಚರಣೆಗೆ ಶಾಲೆಯಲ್ಲಿಯೇ ಮಕ್ಕಳಿಗಾಗಿ ಶಿಕ್ಷಕರು ವಿಶೇಷ ಆಟೋಟ, ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ಆದರೆ ಈ ಬಾರಿ ಅದಾವುದೂ ಇಲ್ಲದಂತಾಗಿದೆ. ಆದರೂ ಬೆಳ್ತಂಗಡಿಯ ಹೋಲಿ ರಿಡೀಮರ್ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಯೂಟ್ಯೂಬ್ ಮೂಲಕ ವಿಶೇಷ ಕಾರ್ಯಕ್ರಮ ನೀಡುವ ಮೂಲಕ ಮಕ್ಕಳ ಮನಗೆದ್ದಿದ್ದಾರೆ.

ಆನ್‍ಲೈನ್‍ನಲ್ಲೇ ದೀಪಾವಳಿ, ಮಕ್ಕಳ ದಿನಾಚರಣೆ:

ಮಕ್ಕಳು ಮನೆಯಲಿದ್ದರೂ ಬೆಳ್ತಂಗಡಿಯ ಹೋಲಿ ರೆಡಿಮರ್ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ನ.14ರಂದು ಬೆಳಗ್ಗೆ 10 ಗಂಟೆಗೆ ನೇರಪ್ರಸಾರದ ಮೂಲಕ, ಮಕ್ಕಳಿಗೆ ಶುಭ ಹಾರೈಸಿದ್ದಾರೆ. ಜೊತೆಗೆ ಆನ್‍ಲೈನ್ ಮೂಲಕವೇ ವಿವಿಧ ಸ್ಪರ್ಧೆಗಳನ್ನೂ ನಡೆಸಿ ವಿಜೇತರ ಆಯ್ಕೆ ನಡೆಸಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು ನೇರವಾಗಿ ಸಂವಹನ ನಡೆಸಿದ್ದಾರೆ.

 

ವಿಶೇಷ ವಿಡಿಯೋ ರಚನೆ:

ಮಕ್ಕಳಿಗೆ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಶುಭಕೋರುವ ಉದ್ದೇಶದಿಂದ ವಿಶೇಷ ವಿಡಿಯೋ ರಚಿಸುವ ವಿನೂತನ ಪ್ರಯತ್ನಕ್ಕೆ ಸಜ್ಜಾಗಿದ್ದಾರೆ. ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ರೆ.ಫಾ. ಜೇಸನ್ ವಿಜಯ್ ಮೋನಿಸ್ ಈ ಪರಿಕಲ್ಪನೆಯನ್ನು ರೂಪಿಸುವ ಜೊತೆಗೆ ವಿಡಿಯೋ ಸಂಕಲವನ್ನೂ ಮಾಡಿದ್ದಾರೆ. ಮನೆಯಲ್ಲಿರುವ ಮಕ್ಕಳಿಗೆ ಸವಿ ನೆನಪನ್ನು ನೀಡುವ ಉದ್ದೇಶದಿಂದ ವಿಡಿಯೋ ರಚಿಸಲಾಗಿದೆ.

ಎರಡೇ ದಿನದಲ್ಲಿ ಸಿದ್ಧವಾಯಿತು ವಿಡಿಯೋ:

ವಿಡಿಯೋ ನಿರ್ಮಾಣದ ಸಿದ್ಧತೆಗೆ ಯೋಜನೆ ರೂಪಿಸಿ, ಎಲ್ಲರೂ ಕಾರ್ಯನಿರತವಾಗಿದ್ದು, ಶಿಕ್ಷಕರು ತಾವೇ ಯೋಚಿಸಿ ಹಾಡುಗಳನ್ನು ಆಯ್ಕೆ ಮಾಡಿ, ನೃತ್ಯ ಸಂಯೋಜನೆ ಮಾಡಿದ್ದಾರೆ. ಇಲ್ಲಿ ವಸ್ತ್ರಾಲಂಕಾರದ ನಿರ್ವಹಣೆಯನ್ನೂ ಶಿಕ್ಷಕರೇ ನಿಭಾಯಿಸಿದ್ದಾರೆ. ಶಾಲೆಯ ಆವರಣವನ್ನೇ ಬಳಸಿಕೊಂಡು ದೃಶ್ಯಗಳ ಚಿತ್ರೀಕರಣ ನಡೆಸಲಾಗಿದೆ. ಮಕ್ಕಳಿಗೆ ಶಾಲೆಯ ಚಿತ್ರಣ ಒದಗಿಸುವ ಜೊತೆಗೆ ಶಿಕ್ಷಕರು ತಮ್ಮ ನೃತ್ಯದ ಮೂಲಕ ಮಕ್ಕಳ ಮನರಂಜಿಸಿದ್ದಾರೆ. ಶೂಟಿಂಗ್ ಮುಗಿದ ಬಳಿಕ ದೃಶ್ಯ ಸಂಯೋಜನೆ, ಸಂಕಲನ ಕಾರ್ಯವನ್ನು ಪ್ರಾಂಶುಪಾಲ ರೆ.ಫಾ. ಜೇಸನ್ ವಿಜಯ್ ಮೋನಿಸ್ ಅವರೇ ನಿರ್ವಹಿಸಿದ್ದು, ಯಾರ ಸಹಾಯವೂ ಇಲ್ಲದೆ, ಕೇವಲ ಎರಡೇ ದಿನಗಳಲ್ಲಿ ಸುಮಾರು 40 ನಿಮಿಷಗಳ ದೃಶ್ಯಾವಳಿಗಳನ್ನು ಸಿದ್ಧಗೊಳಿಸಿದ್ದಾರೆ.

 

ಮೊಬೈಲ್‍ನಲ್ಲೇ ಶೂಟಿಂಗ್:

ಪ್ರಾಂಶುಪಾಲರ ಮಾತು, ಶಿಕ್ಷಕರ ವಿಶೇಷ ಸವಿನುಡಿಗಳು, ಶಾಲಾ ಸಿಬ್ಬಂದಿಗಳ ನುಡಿಗಳು ಹೀಗೆ ಶಾಲೆಯಲ್ಲಿ ಕಾರ್ಯನಿರ್ವಹಿಸುವ 15 ಬೋಧಕ ಹಾಗೂ ನಾಲ್ಕು ಬೋಧಕೇತರ ಸಿಬ್ಬಂದಿಯೂ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಈ ವಿಡಿಯೋವನ್ನು ಮೊಬೈಲ್‍ನಲ್ಲೇ ಚಿತ್ರೀಕರಣ ನಡೆಸಲಾಗಿದೆ. ಆದರೂ ಉತ್ತಮವಾದ ವಿಡಿಯೋ ಮೂಡಿಬಂದಿದ್ದು, ವಿಡಿಯೋ ವೀಕ್ಷಿಸಿದ ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ. ಶಿಕ್ಷಕರಿಗೆ ಸಂದೇಶಗಳನ್ನು ಕಳುಹಿಸಿ ಧನ್ಯವಾದಗಳನ್ನು ತಿಳಿಸಿದ್ದಾರೆ.

 

ಮಕ್ಕಳಿಗೆ ಸರ್ಪೈಸ್:

ಮುಖ್ಯವಾಗಿ ವಿಡಿಯೋ ರಚಿಸಿರುವ ವಿಚಾರ ಮಕ್ಕಳಿಗೆ ಶಿಕ್ಷಕರು ತಿಳಿಸಿರಲಿಲ್ಲ, ಮಕ್ಕಳಿಗೆ ಸರ್ಪೈಸ್ ನೀಡುವ ಉದ್ದೇಶದಿಂದ ಈ ವಿಚಾರವನ್ನು ಗೌಪ್ಯವಾಗಿಯೇ ಉಳಿಸಿಕೊಳ್ಳಲಾಗಿತ್ತು. ನ.13ರಂದು ರಾತ್ರಿ ಪ್ರೀಮಿಯರ್ ಶೋ ಆಯೋಜಿಸಿರುವ ವಿಚಾರ ತಿಳಿಸಲಾಗಿತ್ತು. ಈ ಮೂಲಕ ವಿದ್ಯಾರ್ಥಿಗಳಿಗೂ ವಿಡಿಯೋದಲ್ಲಿ ಏನಿದೆ ಎಂಬ ಕುತೂಹಲ ಮೂಡಿತ್ತು. ಅದರಂತೆ ನ.14ರಂದು ಬೆಳಗ್ಗೆ 10.15ಕ್ಕೆ ಪ್ರದರ್ಶನ ಏರ್ಪಡಿಸಿದ್ದು, ವಿಡಿಯೋ ವೀಕ್ಷಿಸಿದ ಮಕ್ಕಳಿಗೆ ಸಂತಸ ಉಂಟುಮಾಡಿದೆ. ಮುಖ್ಯವಾಗಿ ವಿಡಿಯೋದಲ್ಲಿ ಎಲ್ಲಾ ಮಕ್ಕಳ ಭಾವಚಿತ್ರವನ್ನೂ ಬಳಸಿಕೊಳ್ಳಲಾಗಿದೆ ಎನ್ನುವುದೂ ವಿಶೇಷ.

 

ಮಕ್ಕಳು ಶಾಲೆಯಲ್ಲಿಲ್ಲ ಎನ್ನುವ ಬೇಸರ:

ವಿಡಿಯೋ ಬಗ್ಗೆ ಶಿಕ್ಷಕರು ಪ್ರತಿಕ್ರೀಯೆ ನೀಡಿದ್ದು, ವಿದ್ಯಾರ್ಥಿಗಳು ಇದ್ದಿದ್ದರೆ ತುಂಬಾ ಸಂತಸ ಇರುತ್ತಿತ್ತು. ಅವರ ಚಪ್ಪಾಳೆ, ಗಲಾಟೆ, ಗದ್ದಲಗಳನ್ನು ನೇರವಾಗಿ ನೋಡಿ ತಿಳಿದುಕೊಳ್ಳಬಹುದಿತ್ತು. ಆದರೂ ಈ ವಿಡಿಯೋ ಮೂಲಕ ಮಕ್ಕಳಿಗೆ ಮನರಂಜನೆ ನೀಡಿರುವುದು ಸಂತಸ ತಂದಿದೆ. ಮಕ್ಕಳಿಗಾಗಿ ನೃತ್ಯ ಮಾಡಿರುವುದು ನಮಗೂ ಬಾಲ್ಯದ ನೆನಪನ್ನು ತಂದಂತಾಗಿದೆ. ಮಕ್ಕಳು ಸಮಾಜದ ಉತ್ತಮ ಪ್ರಜೆಯಾಗಿ ಹೊರಹೊಮ್ಮಲಿ ಎನ್ನುವುದು ಶಿಕ್ಷಕವರ್ಗದ ಹಾರೈಕೆ ಎಂದು ತಿಳಿಸಿದ್ದಾರೆ.

 

ಶೇ.100 ಫಲಿತಾಂಶ ಗಳಿಸಿದ್ದ ಶಾಲೆ:

ಬೆಳ್ತಂಗಡಿಯ ಹೋಲಿ ರೆಡಿಮರ್ ಆಂಗ್ಲಮಾಧ್ಯಮ ಶಾಲೆ ಎಸ್.ಎಸ್.ಎಲ್.ಸಿ. ಫಲಿತಾಂಶದ ಸಂದರ್ಭ ಶೇ. 100 ಫಲಿತಾಂಶ ಪಡೆದ ತಾಲೂಕಿನ ಶಾಲೆಯಾಗಿ ಹೊರಹೊಮ್ಮಿತ್ತು. ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಶಿಕ್ಷಣೇತರ ಚಟುವಟಿಕೆಗಳಿಗೂ ಶಾಲೆಯಿಂದ ಪ್ರೋತ್ಸಾಹ ನೀಡಲಾಗುತ್ತಿದೆ. ಶಿಕ್ಷಕರೂ ತಮ್ಮ ವಿನೂತನ ಪ್ರಯತ್ನಗಳ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ.
ಗುರುಗಳು ಎಂದರೆ ಅಜ್ಞಾನವನ್ನು ದೂರಗೊಳಿಸಿ, ಜ್ಞಾನದ ಬೆಳಕನ್ನು ವಿದ್ಯಾರ್ಥಿಗಳಿಗೆ ನೀಡುತ್ತಾರೆ ಎಂಬ ಮಾತಿದೆ. ಆನ್‍ಲೈನ್ ಶಿಕ್ಷಣದ ನಡುವೆಯೂ ತಮ್ಮ ವಿದ್ಯಾರ್ಥಿಗಳ ಬದುಕಿಗೆ ಪೂರಕವಾಗುವ ಸಂದೇಶ ನೀಡುವ ಜೊತೆಗೆ ಮನರಂಜನೆಯನ್ನೂ ನೀಡಿ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿದ ಶಿಕ್ಷಕರಿಗೆ ಪ್ರಜಾಪ್ರಕಾಶ ತಂಡದ ಶುಭ ಹಾರೈಕೆಗಳು. ಬಾಲ್ಯವನ್ನು ನೆನಪಿಸಿಕೊಳ್ಳುತ್ತಾ, ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.

error: Content is protected !!