ಬೆಳ್ತಂಗಡಿ: ದೀಪಾವಳಿ ಸಡಗರ ಬೆಳ್ತಂಗಡಿ ತಾಲೂಕಿನಾದ್ಯಂತ ಮನೆಮಾಡಿದ್ದು ಜನತೆ ಅಗತ್ಯ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಶುಕ್ರವಾರ ಕಂಡುಬಂದಿತು.
ಹಬ್ಬಾಚರಣೆಯ ಸಂಭ್ರಮ ಒಂದೆಡೆಯಾದರೆ, ಬಿ.ಜೆ.ಪಿ. ತಾಲೂಕು ಯುವ ಮೋರ್ಚಾ ಸಾಂಪ್ರದಾಯಿಕ ಶೈಲಿಯಲ್ಲಿ ನಗರದಲ್ಲಿ ಹಬ್ಬ ಆಚರಿಸಲು ಹಾಗೂ ದೀಪಾವಳಿ ದೋಸೆ ಹಬ್ಬ ಆಯೋಜಿಸುವ ಜೊತೆಗೆ ನಗರಾಲಂಕಾರ, ವಿದ್ಯುತ್ ದೀಪಾಲಂಕಾರ ಮಾಡಿರುವುದು ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದೆ.
ಈ ಸಂದರ್ಭದಲ್ಲಿ ಬೆಳ್ತಂಗಡಿ ಬಸ್ ನಿಲ್ದಾಣ ಬಳಿ ಬೆಳಗ್ಗೆ 8 ಗಂಟೆಯಿಂದ ಸಂಜೆವರೆಗೂ 5 ಸಾವಿರಕ್ಕೂ ಹೆಚ್ಚು ದೋಸೆ ಹಂಚಲು ಸಿದ್ಧತೆ ನಡೆಸಲಾಗಿದೆ.
ಶನಿವಾರ ಸಂಜೆ ಗೋಪೂಜೆಯನ್ನೂ ನಡೆಸುವುದಾಗಿ ಈಗಾಗಲೇ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ ಶುಕ್ರವಾರ ಸಂಜೆ ತಾಲೂಕಿನ ವಿವಿಧೆಡೆ ಗುಡುಗು, ಸಿಡಿಲು, ಗಾಳಿ ಸಹಿತ ಮಳೆ ಬಂದಿದ್ದು, ದೀಪಾವಳಿಗೆ ಆಚರಣೆಗೆ ತೊಡಕು ಉಂಟು ಮಾಡುತ್ತದೆಯೇ ಎಂಬ ಭೀತಿ ತಾಲೂಕಿನ ಜನರನ್ನು ಆವರಿಸಿದೆ.