ಕಲ್ಮಂಜ: ವಿವಿಧ ಉದ್ಯೋಗಗಳಿಗೆ ತರಬೇತಿ ಪಡೆದು ಸ್ವ-ಉದ್ಯೋಗ ಮಾಡುವುದಾದರೆ, ಸಂಘಗಳ ಮೂಲಕ ಉದ್ಯಮ ಮಾಡುವುದಾದರೆ ಮಹಿಳಾ ಸ್ವಾವಲಂಬನೆಗೆ ಸರಕಾರ ಅನೇಕ ರೀತಿಯ ಭೌತಿಕ, ಆರ್ಥಿಕ ಹಾಗೂ ಇತರ ರೀತಿಯ ಸಹಕಾರಗಳನ್ನು ನೀಡುತ್ತಿದೆ. ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡು ಜೀವನದಲ್ಲಿ ಯಶಸ್ಸು ಪಡೆಯಿರಿ ಎಂದು ಕಲ್ಮಂಜ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್ ಹೇಳಿದರು.
ಅವರು ಸ್ಕಂದ ಸಂಜೀವಿನಿ ಮಹಿಳಾ ಒಕ್ಕೂಟ ಹಾಗೂ ಕಲ್ಮಂಜ ಗ್ರಾ.ಪಂ. ವತಿಯಿಂದ ಕಲ್ಮಂಜ ಗ್ರಾ.ಪಂ.ಸಭಾಭವನದಲ್ಲಿ ಹಮ್ಮಿಕೊಂಡ ಮಹಿಳೆಯರಿಗೆ ಟೈಲರಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಮುಖ್ಯ ಅತಿಥಿ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ, ಮಹಿಳೆಯೊಬ್ಬರು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಮಹಿಳೆ ಸ್ವಾವಲಂಬಿಯಾದರೆ ಇಡೀ ಕುಟುಂಬವೇ ಪರಾವಲಂಬಿಯಾಗುವುದು ತಪ್ಪುತ್ತದೆ. ಇತರರಿಗೂ ಪ್ರೇರಣೆ, ಮಾರ್ಗದರ್ಶಿಯಾಗಿರುತ್ತದೆ ಎಂದರು.
ತರಬೇತಿ ಪಡೆದ ಸರೋಜಾ ಅವರು ತರಬೇತಿಯ ಅನುಭವ ಹಂಚಿಕೊಂಡರು. ಒಟ್ಟು 20 ಮಂದಿಗೆ ಟೈಲರಿಂಗ್ ತರಬೇತಿ ನೀಡಲಾಗಿದೆ. ಸ್ಕಂದ ಸಂಜೀವಿನಿ ಮಹಿಳಾ ಒಕ್ಕೂಟ ಅಧ್ಯಕ್ಷೆ ಇಂದಿರಾ, ಉಪಾಧ್ಯಕ್ಷೆ ಸೌಮ್ಯಾ, ಕಾರ್ಯದರ್ಶಿ ಸೌಮ್ಯಾ, ಒಕ್ಕೂಟದ ಎಂ.ಬಿ.ಕೆ. ಪುಷ್ಪಾ ಪಿ. ಆಚಾರ್ಯ ಉಪಸ್ಥಿತರಿದ್ದರು.
ಒಕ್ಕೂಟದ ಪದಾಧಿಕಾರಿಗಳಾದ ಮಮತಾ ಸ್ವಾಗತಿಸಿ, ಎಲ್‌ಸಿಆರ್‌ಪಿ ಜಯಂತಿ ನಿರ್ವಹಿಸಿ, ಪಂಚಾಯತ್ ಸಿಬಂದಿ ರಮೇಶ್ ವಂದಿಸಿದರು.