ತಣ್ಣೀರುಪಂತ: ಅಳಕೆ ಗುತ್ತು ಎಂಬಲ್ಲಿ ಬಡ ಕುಟುಂಬವೊಂದರ ಮನೆ ಕಾಮಗಾರಿ ಅರ್ಧಕ್ಕೆ ನಿಂತುಹೋಗಿದ್ದು, ತಕ್ಷಣ ಮನೆ ಕಾಮಗಾರಿ ಪ್ರಾರಂಭಿಸಲು ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಒಂದು ಲಕ್ಷ ರೂ. ಸಹಾಯಹಸ್ತ ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಗ್ರಾಮದ ಅಳಕೆ ಗುತ್ತುಮನೆ ಭಾಗಶಃ ನಶಿಸಿ ಹೋಗಿದ್ದು, ಪ್ರಸಕ್ತ ಇಬ್ಬರು ವಿಧವಾ
ಸಹೋದರಿಯರಾದ ಶಾಂಭವಿ ಶೆಟ್ಟಿ (59) ಹಾಗೂ ಜಯಂತಿ ಶೆಟ್ಟಿ (73) ವಾಸಿಸುತ್ತಿದ್ದಾರೆ.
ಇವರ ಅಳಕೆ ಗುತ್ತುಮನೆ ವಂಶಸ್ಥರ ಸ್ವಾಧೀನದಲ್ಲಿದ್ದ ಸ್ಥಳ ಅಳಿದುಳಿದು ಇದೀಗ ಅರ್ಧ ಎಕರೆಯಷ್ಟು ಮಾತ್ರ ಇದೆ. ಈ ಸಹೋದರಿಯರು ಇಲ್ಲೇ ಸಮೀಪದ ಗುಡಿಸಲಿನಲ್ಲಿ ವಾಸವಾಗಿದ್ದಾರೆ. ಜಯಂತಿ ಅವರ ಇಬ್ಬರು ಪುತ್ರಿಯರನ್ನು ಮದುವೆ ಮಾಡಿಕೊಡಲಾಗಿದೆ. ಜಯಂತಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ, ಸಹೋದರಿಯರಿಬ್ಬರೂ ಬೀಡಿ ಕಟ್ಟಿ ಇಬ್ಬರು ಜೀವನ ಸಾಗಿಸುತ್ತಿದ್ದಾರೆ. ಸಂಬಂಧಿಕರು, ಸಹೋದರನ ಮಕ್ಕಳು ಕೈಲಾದ ಸಹಾಯ ಮಾಡುತ್ತಿದ್ದರೂ. ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಇದರೆಡೆಯಲ್ಲಿ ಆಶ್ರಯ ಯೋಜನೆಯಡಿ ಮನೆ ಮಂಜೂರಾಗಿದೆ. ಪಂಚಾಂಗ, ಗೋಡೆ ನಿರ್ಮಾಣ ಮಾಡಲಾಗಿದೆ. ಮುಂದುವರಿಸಲು ಕೈಯಲ್ಲಿ ಬಿಡಿಗಾಸಿಲ್ಲ. ಮೇಲ್ಛಾವಣಿ ನಿರ್ಮಿಸಿದರಷ್ಟೆ ಸರ್ಕಾರದ ಮೂರನೇ ಕಂತು ಬಿಡುಗಡೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಇವರ ಕುರಿತು ಮಾಹಿತಿ ತಿಳಿದ ಮೂಲತಃ ಗುರುವಾಯನಕೆರೆ ಶಕ್ತಿನಗರದ ಬರೋಡದಲ್ಲಿ ಉದ್ಯಮಿಯಾಗಿರುವ ಶಶಿಧರ ಶೆಟ್ಟಿ ನವಶಕ್ತಿ ಇವರು ಈ ಕುಟುಂಬಕ್ಕೆ ಸಹಾಯ ಹಸ್ತ ನೀಡಿದ್ದಾರೆ. ತನ್ನ ಕುಟುಂಬ ಸಹಿತ ಅಲ್ಲಿಗೆ ತೆರಳಿ ಸಹೋದರಿಯರಿಗೆ ಧೈರ್ಯ ನೀಡಿ ಅರ್ಧಕ್ಕೆ ನಿಂತ ಮನೆ ಕಾಮಗಾರಿ ಮುಂದುವರಿಸಲು ರೂ.ಒಂದು ಲಕ್ಷ ಸಹಾಯ ನೀಡಿದ್ದಾರೆ.
ಉದ್ಯಮಿ ಶಶಿಧರ ಶೆಟ್ಟಿಯವರು ಯಾವುದೇ ಪ್ರಚಾರ ಬಯಸದೇ ತೆರೆಮರೆಯಲ್ಲಿ ಸಾಮಾಜಿಕವಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು. ಬರೋಡದಲ್ಲಿ ತುಳು ಸಂಘಟನೆಯನ್ನು ಸಂಘಟಿಸಿ ಕೆಲಸ ಮಾಡುತ್ತಿದ್ದಾರೆ. ಗುಜರಾತಿನಲ್ಲಿ ನೆರೆ ಸಂದರ್ಭ ತನ್ನ ತಂಡವನ್ನು ಕಟ್ಟಿಕೊಂಡು ಸಹಾಯ ನೀಡಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ವರುಷ ಬಂದ ನೆರೆ ಸಂದರ್ಭ ಜನರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿದ್ದಲ್ಲದೆ ಕಾಳಜಿ ಫ್ಲಡ್ ರಿಲೀಫ್ ಫಂಡ್ ಗೆ ಸಹಾಯ ನೀಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ತಾಲೂಕಿನ ಹಲವು ಜನರಿಗೆ ಆಹಾರ ಸಾಮಾಗ್ರಿಗಳ ಕಿಟ್ ನೀಡಿ ಹಲವರ ಹಸಿವನ್ನು ನೀಗಿಸುವಂತಹ ಕೆಲಸವನ್ನೂ ಮಾಡಿದ್ದಾರೆ ಇವರ ತೆರೆಮರೆಯ ಮಾನವೀಯ ಸ್ಪಂದನೆಗೆ ಪ್ರಜಾಪ್ರಕಾಶ ತಂಡದ ಅಭಿನಂದನೆಗಳು.
ತಣ್ಣೀರುಪಂತ ಭೇಟಿ ನೀಡಿದ ಸಂದರ್ಭದಲ್ಲಿ ಉದ್ಯಮಿ ಶಶಿರಾಜ್ ಶೆಟ್ಟಿ, ಪತ್ರಕರ್ತ ಚೈತ್ರೇಶ್ ಇಳಂತಿಲ, ಸುಶ್ರುತ ಕೃಷ್ಣ ಭಟ್ ಹಲೇಜಿ ಮೊದಲಾದವರು ಉಪಸ್ಥಿತರಿದ್ದರು.