ಸದ್ದಡಗಿದ ‘ದೀಪಾ’ವಳಿ: ಏನಿದು ‘ಹಸಿರು ಪಟಾಕಿ…!?’

ಬೆಳ್ತಂಗಡಿ: ಈ ಬಾರಿ ಹಸಿರು ಪಟಾಕಿ ಸಿಡಿಸಬೇಕು, ಹಸಿರು ಪಟಾಕಿ ಅಂದ್ರೆ ಏನು…? ಅದು ಎಲ್ಲಿ ಸಿಗುತ್ತೆ…? ಹೀಗೆ ಹಲವಾರು ಪ್ರಶ್ನೆಗಳು ಜನರನ್ನು ಕಾಡುತ್ತಿವೆ. ರಾಜ್ಯ ಸರಕಾರ ಕೊರೋನ ಸಾಂಕ್ರಮಿಕ ರೋಗ ಹರಡುವ ಭೀತಿಯಿಂದ ದೀಪಾವಳಿಗೆ ಪಟಾಕಿಗಳನ್ನು ನಿಷೇಧಿಸುವ ಬಿಗಿ ಕ್ರಮ ಕೈಗೊಂಡಿದೆ. ಆದರೆ ಆದೇಶದಲ್ಲಿ ಕೊಂಚ ಸಡಿಲಿಕೆ ತಂದು ಹಸಿರು ಪಟಾಕಿ ಹಚ್ಚಲು ಅವಕಾಶ ಕಲ್ಪಿಸಿದೆ. ಹೆಚ್ಚಿನವರಿಗೆ ಹಸಿರು ಪಟಾಕಿಯ ಬಗ್ಗೆ ಅರಿವಿಲ್ಲ. ಆದ್ದರಿಂದ ‘ಪ್ರಜಾಪ್ರಕಾಶ’ ತಂಡ ಓದುಗರಿಗಾಗಿ ಹಸಿರು ಪಟಾಕಿ ಕುರಿತು ಸಮಗ್ರ ಮಾಹಿತಿ ನೀಡುತ್ತಿದೆ.

ಹಸಿರು ಪಟಾಕಿ ಎಂದರೆ:
ಹಸಿರು ಪಟಾಕಿ ಎಂದರೆ ಪ್ರಕೃತಿಗೆ ಹೆಚ್ಚು ಹಾನಿ ಮಾಡದ ಪಟಾಕಿಗಳು. ಕಡಿಮೆ ಹೊಗೆ ಹಾಗೂ ಶಬ್ದ ಉಳ್ಳ ಪಟಾಕಿಗಳು. ಸಣ್ಣ ಪಟಾಕಿಗಳನ್ನು ಈ ಗುಂಪಿಗೆ ಸೇರಿಸಬಹುದು. ಈ ಹಸಿರು ಪಟಾಕಿಗಳು ಸ್ಪೋಟಿಸಿದಾಗ ನೀರಿನ ಆವಿ ಮತ್ತು ಹೊಗೆ ಹೊರ ಹಾಕುವುದನ್ನು ದುರ್ಬಲಗೊಳಿಸುತ್ತದೆ. ಇದರಲ್ಲಿ ಸುರಕ್ಷಿತ ಅಲ್ಯೂಮಿನಿಯಂ ಮತ್ತು ಥರ್ಮೈಟ್ ಮೊದಲಾದ ಪದಾರ್ಥಗಳು ಇರುತ್ತದೆ.

ರಾಸಾಯನಿಕ ಪಟಾಕಿ ಬ್ಯಾನ್ ಯಾಕಾಗಿ?:
ಬಾಂಬ್, ಮಾಲೆ ಪಟಾಕಿ ಹಾಗೂ ಭಯಂಕರ ಶಬ್ದದಿಂದ ಕೂಡಿದ ಪಟಾಕಿಗಳು ಈ ಹಸಿರು ಪಟಾಕಿ ಪಟ್ಟಿಯಲ್ಲಿ ಇರುವುದಿಲ್ಲ. ಇವುಗಳಲ್ಲಿ ಲೀಥಿಯಂ, ಆರ್ಸೆನಿಕ್ ಮತ್ತು ಸೀಸ, ನೈಟ್ರೇಟ್ ಮತ್ತು ಬೇರಿಯಂಗಳು ಕಂಡು ಬರುತ್ತವೆ ಆದ್ದರಿಂದ ನಿಷೇಧಿಸಲಾಗಿದೆ. ಇವುಗಳಿಂದ ಹೊರಸೂಸುವ ಹೊಗೆ ಶ್ವಾಸಕೋಶಕ್ಕೆ ಹೋದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಕೊರೋನಾ ವೈರಾಣು ಶ್ವಾಸಕೋಶ ಸಮಸ್ಯೆ ಹೊಂದಿದವರಿಗೆ ತೀವ್ರ ರೀತಿಯ ಸಮಸ್ಯೆ ಉಂಟು ಮಾಡುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಹಸಿರು ಪಟಾಕಿ ಗುರುತಿಸುವುದು ಹೇಗೆ?:
ಪಟಾಕಿ ಮೇಲೆ ನಮೂದಿಸಲಾಗಿರುವ ಲೋಗೋ ಮತ್ತು ಕ್ಯೂ.ಆರ್. ಕೋಡ್ ಮೂಲಕ ಹಸಿರು ಪಟಾಕಿಗಳನ್ನು ಗುರುತಿಸಬಹುದು. ಸಾಂಪ್ರದಾಯಿಕ ಪಟಾಕಿಗಳಲ್ಲಿ ಈ ಕ್ಯೂಆರ್ ಕೋಡ್ ವ್ಯವಸ್ಥೆ ಇಲ್ಲ. ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಇರುವ ಸಾಂಪ್ರದಾಯಿಕ ಪಟಾಕಿಗಳಲ್ಲಿ ಹಸಿರು ಪಟಾಕಿ ಎಂದು ವರ್ಗೀಕರಿಸುವುದಾದರೆ ಮಕ್ಕಳ ಕ್ಯಾಪ್ ಪಟಾಕಿ, ಸುರುಸುರು ಕಡ್ಡಿ ಹಾಗೂ ನೆಲಚಕ್ರ ಮೊದಲಾದವುಗಳನ್ನು ಹಸಿರು ಪಟಾಕಿಯೆಂದು ಪರಿಗಣಿಸಬಹುದು. ಪಟಾಕಿಯ ಬಾಕ್ಸ್‍ನಲ್ಲಿ ಅಧಿಕೃತ ಮುದ್ರೆ ಇರುತ್ತದೆ.

ಉತ್ಪಾದನೆ ಕಡಿಮೆ:
ಪರಿಸರ ಸ್ನೇಹಿ ಹಾಗೂ ಅತ್ಯಂತ ಸುರಕ್ಷಿತ ಪಟಾಕಿಗಳನ್ನು ಹಸಿರು ಪಟಾಕಿಯೆಂದು ಹೇಳಲಾಗುತ್ತದೆ. ಸಧ್ಯ ಜನರಿಗೆ ಹಸಿರು ಪಟಾಕಿ ಮತ್ತು ಸಾಂಪ್ರದಾಯಿಕ ಪಟಾಕಿಗಳ ನಡುವೆ ಗೊಂದಲ ಉಂಟಾಗಿದೆ. ವರ್ತಕರಲ್ಲಿಯೂ ಈ ಸಮಸ್ಯೆ ಕಾಡುತ್ತಿದೆ. ಇಲ್ಲಿಯವರೆಗೆ ನಿಷೇಧ ಪ್ರಸ್ತಾಪ ಇಲ್ಲದ್ದರಿಂದ ಉತ್ಪಾದನೆಯೂ ಕಡಿಮೆ ಎನ್ನಲಾಗುತ್ತಿದೆ. ಇಲ್ಲಿಯವರೆಗೆ ಸಾಂಪ್ರದಾಯಿಕ ಪಟಾಕಿಗಳ ಉತ್ಪಾದನೆಯೇ ದೇಶದಲ್ಲಿ ಹೆಚ್ಚಿದೆ. ತಮಿಳು ನಾಡಿನ ಶಿವಕಾಶಿಯಲ್ಲಿ ಉತ್ಪಾದಿಸುವ ಪಟಾಕಿಗಳು ಹೆಚ್ಚಾಗಿ ಸಾಂಪ್ರದಾಯಿಕ ಪಟಾಕಿಗಳೇ ಆಗಿವೆ. ಮುಂದೆ ಬೇಡಿಕೆ ಹೆಚ್ಚಾದಲ್ಲಿ ಹಸಿರು ಪಟಾಕಿಗಳ ಉತ್ಪಾದನೆ ಹೆಚ್ಚಬಹುದು.

230 ಕಂಪನಿಗಳಿಂದ ಹಸಿರು ಪಟಾಕಿ ಉತ್ಪಾದನೆ!:
2018ರಲ್ಲಿ ದೆಹಲಿಯಲ್ಲಿ ಸಾಂಪ್ರದಾಯಿಕ ಪಟಾಕಿಯನ್ನು ನಿಷೇಧಿಸಿ ಹಸಿರು ಪಟಾಕಿಗೆ ಅವಕಾಶವನ್ನು ಸರ್ವೋಚ್ಚ ನ್ಯಾಯಾಲಯ ನೀಡಿತ್ತು. ದೆಹಲಿಯಲ್ಲಿ ಹಸಿರು ಪಟಾಕಿಗಳನ್ನು ತಯಾರಿಸಲಾಗುತ್ತದೆ. ಆದರೆ ರಾಜ್ಯದಲ್ಲಿ ಹಸಿರು ಪಟಾಕಿ ಮಾರುಕಟ್ಟೆಗೆ ಪ್ರವೇಶ ಪಡೆದಿಲ್ಲ. ಈ ಬಗ್ಗೆ ಅರಿವನ್ನು ಸರಕಾರವೂ ಈವರೆಗೆ ಮೂಡಿಸಿಲ್ಲ. ದೇಶಾದ್ಯಂತ 230 ಕಂಪೆನಿಗಳೊಂದಿಗೆ ಹಸಿರು ಪಟಾಕಿ ತಯಾರಿಕೆಯ ಒಪ್ಪಂದ ಮಾಡಿಕೊಂಡಿದೆ. ಆದ್ದರಿಂದ ಸದ್ಯ ಕೆಲವೇ ಕೆಲವು ಕಂಪನಿಗಳು ಹಸಿರು ಪಟಾಕಿ ಉತ್ಪಾದಿಸುತ್ತಿವೆ.

ಏನೇ ಇರಲಿ, ದೀಪಮಯ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ, ಸಾಂಪ್ರದಾಯಿಕವಾಗಿ ಆಚರಿಸುವ ಮೂಲಕ ಹಬ್ಬದ ಮಹತ್ವ ಹೆಚ್ಚಿಸೋಣ. ಈ ಮೂಲಕ ಸಂಸ್ಕತಿ ಕಾಪಾಡುವ ಜೊತೆಗೆ ಸುಂದರ ಪ್ರಕೃತಿಯ ಉಳಿವು, ನಮ್ಮ ಹಾಗೂ ನಮ್ಮ ಹಿರಿಯರ ಆರೋಗ್ಯ ವೃದ್ಧಿಗೂ ಕಾರಣರಾಗೋಣ ಎಂಬುದೇ ಪ್ರಜಾಪ್ರಕಾಶ ತಂಡದ ಆಶಯ.

error: Content is protected !!