
ದೆಹಲಿ: ಪಾಕಿಸ್ತಾನದಲ್ಲಿದ್ದ 1,817 ಹಿಂದು ದೇವಾಲಯ ಮತ್ತು ಸಿಖ್ ಗುರುದ್ವಾರಗಳ ಪೈಕಿ ಈಗ ಕೇವಲ 37 ಮಾತ್ರ ಉಳಿದುಕೊಂಡಿವೆ. ಉಳಿದ 1780 ಪೂಜಾ ಸ್ಥಳಗಳು ಕಣ್ಮರೆಯಾಗಿವೆ ಎಂಬ ಆಘಾತಕಾರಿ ವರದಿ ಬಯಲಾಗಿದೆ.
ಅಲ್ಪಸಂಖ್ಯಾತ ಒಕ್ಕೂಟದ ಸಂಸದೀಯ ಸಮಿತಿಯ ಮುಂದೆ ಇತ್ತೀಚೆಗೆ ಇಂಥದ್ದೊಂದು ವರದಿ ಮಂಡಿಸಲಾಗಿದೆ. ಅದರಲ್ಲಿನ ದತ್ತಾಂಶಗಳು ಕಠೋರ ವಾಸ್ತವಾಂಶ ಬಿಚ್ಚಿಟ್ಟಿವೆ. ಶತಮಾನಗಳಷ್ಟು ಇತಿಹಾಸ ಹೊಂದಿದ್ದ ಪೂಜಾ ಸ್ಥಳಗಳು ಕಳಪೆ ನಿರ್ವಹಣೆ, ಹಿಂದೂ ಮತ್ತು ಸಿಖ್ ಸಮುದಾಯಗಳ ಜನಸಂಖ್ಯೆ ಕ್ಷೀಣಿಸಿದ್ದರಿಂದ ಅಸ್ವಿತ್ವ ಕಳೆದುಕೊಂಡಿವೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲಿನ ಮಾಧ್ಯಮಗಳು ವರದಿ ಮಾಡಿದಂತೆ, ಪಾಕಿಸ್ತಾನದಾದ್ಯಂತ ಸದ್ಯ 37 ದೇಗುಲ ಮತ್ತು ಗುರುದ್ವಾರಗಳು ಮಾತ್ರ ಚಾಲ್ತಿಯಲ್ಲಿವೆ. ಉಳಿದವುಗಳು ಕಣ್ಮರೆಯಾಗಿವೆ. ಅಳಿದುಳಿದ ಪೂಜಾ ಸ್ಥಳಗಳ ರಕ್ಷಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಅಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳು ಮತ್ತು ಸಿಖ್ಖರಿಗೆ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.