
ಹೊಸಪೇಟೆ: ಕೋರ್ಟ್ ಆದೇಶ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಬಸ್ ಜಪ್ತಿ ಮಾಡಿದ ಘಟನೆ ಗಂಗಾವತಿಯಲ್ಲಿ ನಡೆದಿದೆ.
ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ ಪ್ರಕರಣದಲ್ಲಿ ಸಂತ್ರಸ್ತರಿಗೆ ಪರಿಹಾರ ಪಾವತಿಸಲು ಮಾಡಿದ್ದ ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇಲ್ಲಿನ ನ್ಯಾಯಾಲಯದ ಸಿಬ್ಬಂದಿ ಗುರುವಾರ ಸರ್ಕಾರಿ ಬಸ್ ಜಪ್ತಿ ಮಾಡಿದರು.
ಹೊಸಪೇಟೆ ವಿಭಾಗಕ್ಕೆ ಸೇರಿದ ಬಸ್, ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಸ್ಥಳಕ್ಕೆ ತೆರಳಿ ಜಪ್ತಿ ಮಾಡಿದ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ, ಬಳಿಕ ನ್ಯಾಯಾಲಯದ ವಶಕ್ಕೆ ಒಪ್ಪಿಸಿದರು.
2019ರ ನವೆಂಬರ್ 28ರಂದು ರಸ್ತೆ ಅಪಘಾತ ಸಂಭವಿಸಿತ್ತು. ಗಂಗಾವತಿಯಿಂದ ಹೊಸಪೇಟೆಗೆ ಹೊರಟಿದ್ದ ಬಸ್, ಕಡೇಬಾಗಿಲು ಸೇತುವೆಯ ಸಮೀಪ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಹೊಸಪೇಟೆಯಿಂದ ಗಂಗಾವತಿಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಶಿಕ್ಷಣ ಇಲಾಖೆಯ ಮೊಹಮ್ಮದ್ ಸಲಾವುದ್ದೀನ್ ಆಯುಬಿ ಮತ್ತು ನಿಖಾತ ಬೇಗಂ ಎಂಬವರು ಸಾವನ್ನಪ್ಪಿದ್ದರು.
ಮೋಟಾರ್ ಅಪಘಾತ ಪರಿಹಾರ ನ್ಯಾಯಮಂಡಳಿ ಅಡಿಯಲ್ಲಿ ಈ ಪ್ರಕರಣವನ್ನು ವಿಚಾರಣೆ ನೀಡಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಯ್ಕ್ ಅವರು, ಅರ್ಜಿದಾರರಿಗೆ 2025ರ ಜುಲೈ 25 ರೊಳಗೆ 55.72 ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಿದ್ದರು. ಆದರೆ ಪರಿಹಾರ ನೀಡುವಲ್ಲಿ ಸಾರಿಗೆ ಇಲಾಖೆಯ ಹೊಸಪೇಟೆ ವಿಭಾಗೀಯ ಕಚೇರಿ ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಆದೇಶದ ಮೇರೆಗೆ ಇದೀಗ ಬಸ್ ಜಪ್ತಿ ಮಾಡಲಾಗಿದೆ.