ಧರ್ಮಸ್ಥಳ: ಕರ್ನಾಟಕ ಸರಕಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ದಂಪತಿ ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನಕ್ಕೆ ಭೇಟಿ ನೀಡಿ ತಾಳೆಗರಿ ಸಂರಕ್ಷಣಾ ವಿಧಾನದ ಕುರಿತು ಮಾಹಿತಿ ಪಡೆದರು.
ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ. ವಿಘ್ನರಾಜ್ ಅವರು ಸುರೇಶ್ ಕುಮಾರ್ ಹಾಗೂ ಅವರ ಪತ್ನಿ ಸಾವಿತ್ರಿ ಸುರೇಶ್ ಕುಮಾರ್ ಅವರಿಗೆ ಹಸ್ತಪ್ರತಿ ಸಂಗ್ರಹ- ಸಂರಕ್ಷಣೆ- ಸಂಪಾದನೆ ಇತ್ಯಾದಿ ವಿಷಯಗಳ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಂಶೋಧನಾ ಪ್ರತಿಷ್ಠಾನದ ಕುರಿತು ಸಚಿವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಹಸ್ತಪ್ರತಿ ಸಂಗ್ರಹಾಲಯಕ್ಕೆ ಪ್ರಥಮ ಬಾರಿಗೆ ಭೇಟಿ ನೀಡುವ ಅವಕಾಶ ದೊರಕಿತು. ತಾಳೆಗರಿ ಗ್ರಂಥಗಳ ಕುರಿತು ಈ ವರೆಗೆ ಕೇಳಿದ್ದೇವೆ. ಇಂದು ಮೊದಲ ಬಾರಿಗೆ ನೋಡಿದ ಅನುಭವವಾಯಿತು. ರಾಮಾಯಣ, ಮಹಾಭಾರತ, ಭಾಗವತ, ಬಸವ ಪುರಾಣ ಇತ್ಯಾದಿಗಳೆಲ್ಲವೂ ಈ ತಾಳೆಗರಿ ಗ್ರಂಥಗಳ ಮೂಲಕ ಪ್ರಕಟಣೆ ಆಗುತ್ತಿದ್ದ ಕಾಲ ನೆನಪಿಗೆ ಬಂದಿತು. ಇಂತಹ ಅಮೂಲ್ಯ ನಿಧಿಗಳನ್ನು ಸಂಗ್ರಹಿಸಿ ಜತನವಾಗಿ ಕಾಪಾಡುವ ದೊಡ್ಡ ಕೆಲಸ ಈ ಪ್ರಾಚ್ಯ ವಿದ್ಯಾಸಂಸ್ಥೆಯಿಂದ ಆಗುತ್ತಿದೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ದೇವಳ ಕಚೇರಿ ಪ್ರಬಂದಕ ದೀಕ್ಷಿತ್, ಪ್ರತಿಷ್ಠಾನದ ಸಹಾಯಕ ಸಂಶೋಧಕ ಪವನ್ ಕುಮಾರ್, ಮಂಜುಳಾ, ಮಮತಾ ಉಪಸ್ಥಿತರಿದ್ದರು.