ಶಿಶಿಲದ ಸಮಗ್ರ ಅಭಿವೃದ್ಧಿಗೆ ಯೋಜನೆ: ಕೋಟ ಶ್ರೀನಿವಾಸ ಪೂಜಾರಿ: ಮತ್ಸ್ಯ ಸಂರಕ್ಷಣಾ ಫಲಕ ಅನಾವರಣ

 

ಶಿಶಿಲ: ಧಾರ್ಮಿಕತೆ ಮತ್ತು ಮತ್ಸ್ಯ ಸಂಪತ್ತಿಗೂ ಭಾವನಾತ್ಮಕ ಸಂಬಂಧ ಇರುವ ಕ್ಷೇತ್ರವಾದ ಶಿಶಿಲದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ, ಒಂದು ತಿಂಗಳ ಒಳಗಾಗಿ ಬೇಕಾದ ಕ್ರಿಯಾ ಯೋಜನೆ ರೂಪಿಸಲಾಗುವುದು. ಮುಖ್ಯವಾಗಿ ಈ ಕ್ಷೇತ್ರ ಅಭಿವೃದ್ಧಿಪಡಿಸಲು ಬೇಕಾದ ಯೋಚನೆ, ಯೋಜನೆ ರೂಪಿಸಲಾಗುವುದು. ಸ್ಥಳೀಯ ಶಾಸಕರ ಹಾಗೂ ಜನತೆಯ ಬೇಡಿಕೆಯಂತೆ ಕಪಿಲಾ ನದಿಯ ಎರಡೂ ಬದಿ ಮತ್ಸ್ಯ ವೀಕ್ಷಣೆಗೆ, ವೀಕ್ಷಣಾ ಗ್ಯಾಲರಿ ಮಾಡಬೇಕು ಎಂಬ ಬೇಡಿಕೆಯಿದೆ ಈ ಕುರಿತು ಚಿಂತನೆ ನಡೆಸಿ, ಧಾರ್ಮಿಕ ದತ್ತಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯಿಂದ ಬಿಡುಗಡೆ ಮಾಡಬಹುದಾದ ಅನುದಾನದ ಕುರಿತು ಯೋಚನೆ ಮಾಡಲಾಗುವುದು. ಅದೇ ರೀತಿ ಸಣ್ಣ ನೀರಾವರಿ ಇಲಾಖೆಯಿಂದ ಹೂಳೆತ್ತಲು ಸಾಧ್ಯವಿದೆ, ಅದಕ್ಕೂ ಪ್ರಯತ್ನ ಮಾಡಲಾಗುವುದು. ಮುಖ್ಯವಾಗಿ ಇಂದು ನಾಮಫಲಕ ಅಳವಡಿಸಿ ದೇಗುಲದ 4ಕಿ.ಮೀ. ಸುತ್ತಮುತ್ತ ಮೀನುಗಾರಿಕೆ ನಿಷೇಧಿಸಲಾಗಿದೆ ಮತ್ತು ಸಂರಕ್ಷಣಾ ವಲಯ ಎಂಬುದಾಗಿ ಸರಕಾರದ ಪರವಾಗಿ ಘೋಷಣೆಯನ್ನು ಮೀನುಗಾರಿಕೆ ಇಲಾಖೆ ಪರವಾಗಿ ಮಾಡುತ್ತಿದ್ದೇನೆ ಎಂದು ಮೀನುಗಾರಿಕೆ, ಬಂದರುಗಳು ಹಾಗೂ ಒಳನಾಡು ಜಲಸಾರಿಗೆ, ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಶಿಶಿಲೇಶ್ವರ ದೇಗುಲ ಮಹಾದ್ವಾರ ಹಾಗೂ ದೇಗುಲದ ಬಳಿ ಮತ್ಸ್ಯ ಸಂರಕ್ಷಣಾ ಫಲಕ ಅನಾವರಣಗೊಳಿಸಿ, ಮತ್ಸ್ಯ ಸಂಕುಲದ ವೀಕ್ಷಣೆ ನಡೆಸಿ ಮಾತನಾಡಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ,  ಮೀನುಗಾರಿಕೆ ನಿಷೇಧಿಸಿದರೆ ದೇಗುಲದ ಮೀನುಗಳ ಸಂರಕ್ಷಣೆ ಮಾಡಲು ಸಾಧ್ಯ ಎಂಬ ಸ್ಥಳೀಯರ ಆಶಯವನ್ನು ಪರಿಗಣಿಸಿ, ಸರಕಾರದಿಂದ ಬೇಡಿಕೆ ಈಡೇರಿಸಲಾಗಿದೆ. ಅದರಲ್ಲೂ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಈ ಆದೇಶ ಹೊರಡಿಸುವಂತೆ ಮಾಡುವ ಕಾರ್ಯ ಕೋಟಾ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ನಡೆದಿರುವುದು ಸಂತಸ ತಂದಿದೆ ಎಂದರು.

ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ್, ತಹಶೀಲ್ದಾರ್ ಮಹೇಶ್, ತಾ.ಪಂ. ಅಧ್ಯಕ್ಷೆ ದಿವ್ಯ ಜ್ಯೋತಿ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯ್ಕ್, ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಪಾರ್ಶ್ವನಾಥ್, ಮೀನುಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಡಾ. ಸುಶ್ಮಿತಾ, ಶಿಶಿಲ ದೇವಸ್ಥಾನ ಆಡಳಿತಾಧಿಕಾರಿ ಶ್ರೀನಿವಾಸ ಮೂಡಿತ್ತಾಯ, ಕೃಷಿ ಇಲಾಖೆ ಆಡಳಿತಾಧಿಕಾರಿ ಚಿದಾನಂದ ಹೂಗಾರ್, ಚಂದ್ರಶೇಖರ್ ಉಪಸ್ಥಿತರಿದ್ದರು.

 

error: Content is protected !!