
ಬೆಳ್ತಂಗಡಿ: ತಾಲೂಕು ಆಡಳಿತ ಜನರ ಬಳಿಗೆ ಎಂಬ ಕಲ್ಪನೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಬೇಕು ಎಂಬ ನಿಟ್ಟಿನಲ್ಲಿ ನಡೆದ ಜನಸ್ಪಂದನಾ ಸಭೆಯು ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳ ಪೈಕಿ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಥಮ, ಎಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಕೊಯ್ಯೂರು ಗ್ರಾಮಮಟ್ಟದ 48ನೇ ಹಾಗೂ ಗ್ರಾಮೀಣ ಭಾಗದ ಕೊನೆಯ ಜನಸ್ಪಂದನ ಸಭೆಯಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಜನಸಾಮಾನ್ಯರು ಕಂದಾಯ,, ಅರಣ್ಯ ಸೇರಿದಂತೆ ವಿವಿಧ ಇಲಾಖೆಯ ಸಮಸ್ಯೆಗಳನ್ನು ನನ್ನ ಉಪಸ್ಥಿತಿಯಲ್ಲಿ ಪರಿಹರಿಸಬೇಕು ಜನರು ನೇರವಾಗಿ ಅಧಿಕಾರಿಗಳಲ್ಲಿ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಬೇಕು ಎಂಬ ಕಲ್ಪನೆಯಲ್ಲಿ ಮೂಡಿ ಬಂದ ಈ ಜನಸ್ಪಂದನ ಸಭೆ ಇಡೀ ತಾಲೂಕಿನ 81 ಗ್ರಾಮಗಳನ್ನೊಳಗೊಂಡ 48 ಗ್ರಾಮ ಪಂಚಾಯತ್ ಗಳಲ್ಲಿ ಯಶಸ್ವಿಯಾಗಿ ಮೂಡಿಬಂದಿದೆ.

ಹೆಚ್ಚಿನ ಗ್ರಾಮಗಳಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು ದೂರುಗಳು ಬಂದಿದ್ದು ಮುಂದಿನ ಹದಿನೈದು ದಿನಗಳಿಗೊಮ್ಮೆ ಬಂದಿರುವ ದೂರುಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಚರ್ಚಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜಕೀಯ ರಹಿತವಾಗಿ ಕ್ರಮ ಕೈಗೊಂಡು ಪ್ರಾಮಾಣಿಕವಾಗಿ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು ಎಂದರು.

ಎಂಬತ್ತೊಂದು ಗ್ರಾಮಗಳನ್ನೊಳೊಂಡ ಬೆಳ್ತಂಗಡಿ ತಾಲೂಕಿನ 48 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಜನಸ್ಪಂದನ ಸಭೆಯು ರಾಜಕೀಯ ರಹಿತವಾಗಿ ಯಶಸ್ವಿಯಾಗಿ ಮೂಡಿಬಂದಿರುವುದಲ್ಲದೇ ತಾಲೂಕಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕೆಲವೊಂದು ಸಮಸ್ಯೆಗಳು ಸ್ಥಳದಲ್ಲೇ ಇತ್ಯರ್ಥಗೊಂಡಿದೆ, ಕಂದಾಯ ,ಅರಣ್ಯ, ಶಾಲಾ ಕಟ್ಟಡ, ರಸ್ತೆ ದುರಸ್ತಿ, ಅರಣ್ಯ ಇಲಾಖೆಯ ಗೊಂದಲ,ಸೇರಿದಂತೆ ಹಲವಾರು ಸಮಸ್ಯೆ ಹಾಗೂ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರಿಗೆ ಶಾಸಕರ ಸಮ್ಮುಖದಲ್ಲಿ ನೇರವಾಗಿ ಪ್ರಶ್ನಿಸುವ ಅವಕಾಶ ಸಿಕ್ಕಿತು. ಶಾಸಕರ ಜನಸ್ಪಂದನ ಸಭೆ ಇಡೀ ರಾಜ್ಯಕ್ಕೆ ಮಾದರಿಯಾಗಿ ಮೂಡಿ ಬಂದಿದೆ. ಸಮಸ್ಯೆಗಳನ್ನು ಹೊತ್ತು ವಿವಿಧ ಇಲಾಖೆಗಳಿಗೆ ಅಲೆದಾಡಿದರೂ ಸಿಗದ ಪರಿಹಾರ ಇವತ್ತು ಶಾಸಕರ ನೇತೃತ್ವದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸಿಕ್ಕಿದೆ ಎಂದು ಗ್ರಾಮಸ್ಥರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.