ಬೆಳ್ತಂಗಡಿ ಕೃಷಿ ಇಲಾಖೆಯಿಂದ ಫಲಾನುಭವಿಗಳಿಗೆ ಯಂತ್ರೋಪಕರಣ ವಿತರಣೆ: ಮಿನಿ ಟ್ರ್ಯಾಕ್ಟರ್ ಹಸ್ತಾಂತರಿಸಿದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಯಾಂತ್ರಿಕ ಕೃಷಿ ಪ್ರಯೋಗದಿಂದ‌ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ‌ ಜನ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಬೇಕು. ಈ ಮೂಲಕ ಆತ್ಮನಿರ್ಭರ ಭಾರತದೆಡೆಗೆ ಕೃಷಿ ಸಮಾಜ ಕೊಂಡೊಯ್ಯುವ ಕೆಲಸ ಯುವ ಸಮುದಾಯದಿಂದ ನಡೆಯಬೇಕಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.

 

 

ಅವರು ಬೆಳ್ತಂಗಡಿ ತಾಲೂಕು ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ೨೦೨೦-೨೧ನೇ ಸಾಲಿನ ಕೃಷಿ ಯಾಂತ್ರೀಕರಣ ಉಪ ಅಭಿಯಾನ (ಎಸ್.ಎಂ.ಎ.ಎಂ.) ಯೋಜನೆಯಡಿ ಪ.ಜಾತಿ/ಪ.ಪಂ. ರೈತರಿಗೆ ಶೇ.50ರ ಸಹಾಯಧನದಡಿ 2 ಮಿನಿ ಟ್ರಾಕ್ಟರ್, ನಾಲ್ಕು ಸಾಲು ಭತ್ತ ನಾಟಿ ಮಾಡುವ ಟ್ರಾನ್ಸ್ ಪ್ಲಾಂಟರ್, 7 ಜನ ಸಾಮಾನ್ಯ ವರ್ಗದ ರೈತರಿಗೆ ಕಳೆ ಕಟಾವು ಕೃಷಿ ಯಂತ್ರೋಪಕರಣ ವಿತರಿಸಿ ಮಾತನಾಡಿದರು.

ಕೃಷಿ ಬದುಕಿನಲ್ಲಿ ಸ್ವ-ಉದ್ಯೋಗ ಕಂಡುಕೊಳ್ಳುವಲ್ಲಿ ಇಸ್ರೇಲ್ ಮಾದರಿ ಯಂತ್ರೋಪಕರಣ ಬಳಕೆ ಮಾಡಿ ಕಡಿಮೆ ಬಂಡವಾಳ ಹೂಡಿಕೆ ಮಾಡಿ, ಹೆಚ್ಚು ಇಳುವರಿ ಪಡೆಯುವಂತಾಗಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಆತ್ಮನಿರ್ಭರ ಭಾರತದ ಮೊದಲ ಪಂಚಾಂಗವೇ ಆತ್ಮ ವಿಶ್ವಾಸ. ಕೋವಿಡ್ ಆರ್ಥಿಕ ಹಿನ್ನಡೆ ಮಧ್ಯವೂ ದೇಶಕ್ಕೆ ಆಧಾರವಾಗಿ ನಿಂತದ್ದು ಕೃಷಿ ಕ್ಷೇತ್ರ. ಭಾರತ ಇಲ್ಲಿ ಉತ್ಪಾದನೆ‌ ಹೆಚ್ಚಿಸಿಕೊಂಡು ವಿದೇಶಗಳಿಗೂ ಆಹಾರ ರಫ್ತು ಮಾಡುವ ಮೂಲಕ ಒದಗಿಸುವ ಮೂಲಕ ವಿಶ್ವಕ್ಕೆ ಮಾದರಿಯಾಗಿದೆ. ಕೃಷಿಕರ ಬದುಕು ಹಸನಾಗಿಸಲು ಸರಕಾರದ ಯೋಜನೆ ಸದ್ಭಳಕೆ ಆಗುವಂತಾಗಬೇಕು ಎಂದರು.


ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಎಂ.ಶೆಟ್ಟಿ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್ ಎಂ.ಕಲ್ಮಂಜ, ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ್, ಸೌಮ್ಯಲತಾ, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ತಾ.ಪಂ. ಸದಸ್ಯರಾದ ಜಯಶೀಲಾ, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್ ಟಿ.ಎನ್., ತಾ.ಪಂ. ಇಒ ಕುಸುಮಾಧರ್, ತಾಂತ್ರಿಕ ಕೃಷಿ ಅಧಿಕಾರಿ ಹುಮೇರ ಜಬೀನ್, ಸಿಬಂದಿಗಳು ಉಪಸ್ಥಿತರಿದ್ದರು.
ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

error: Content is protected !!