ಬೆಳ್ತಂಗಡಿ: ನ.4 ರಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ಬೆಳ್ತಂಗಡಿ ಕಾಳಜಿ ಫ್ಲಡ್ ರಿಲೀಫ್ ಫಂಡ್ ವತಿಯಿಂದ 2.74 ಕೋಟಿ ರೂ. ಪರಿಹಾರ ಧನ ವಿತರಣೆ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕ್ರತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ, ಸಂಸದ ನಳಿನ್ ಕುಮಾರ್ ಕಟೀಲು, ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಎಸ್.ಕೆ.ಡಿ.ಆರ್.ಡಿ.ಪಿ. ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಹೆಚ್. ಮಂಜುನಾಥ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಫಲಾನುಭವಿಗಳಷ್ಟೇ ಭಾಗವಹಿಸಲಿದ್ದಾರೆ.
ಸಂತ್ರಸ್ತ ಕುಟುಂಬಗಳಿಗೆ ಸಹಾಯ,
ಕಾಳಜಿ ಫ್ಲಡ್ ರಿಲೀಫ್ ಫಂಡ್ :
ತಾಲೂಕಿನಲ್ಲಿ ನೆರೆ ಸಂದರ್ಭ ತಾಲೂಕಿನ ಹಲವಾರು ಮನೆಗಳಿಗೆ ಹಾನಿಯಾಗಿ ಸಾರ್ವಜನಿಕರು ಸಂಕಷ್ಟಪಡುವಂತಾಗಿತ್ತು. ಸಾರ್ವಜನಿಕರು ವಿವಿಧ ರೀತಿಯಲ್ಲಿ ಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ, ಕಾಳಜಿ ಬೆಳ್ತಂಗಡಿ ಫ್ಲಡ್ ರಿಲೀಫ್ ಫಂಡ್ ರಚಿಸಲಾಗಿತ್ತು. ಈ ತಂಡದಲ್ಲಿ ಎಲ್ಲಾ ಜಾತಿಯ, ಧರ್ಮದವರಿದ್ದು, ಶಾಸಕ ಹರೀಶ್ ಪೂಂಜಾ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
ಫಂಡ್ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ಸಮಸ್ತ ದಾನಿಗಳ ಸಹಕಾರದಿಂದ ಹಣ ಸಂಗ್ರಹಿಸಿ, ಸಂತ್ರಸ್ತರಿಗೆ ನೆರವು ನೀಡುವ ಯೋಜನೆ ರೂಪಿಸಲಾಗಿತ್ತು. ಆದರೆ ಹಣವನ್ನು ಸಂತ್ರಸ್ತರಿಗೆ ಸಾಂದರ್ಭಿಕವಾಗಿ ನೀಡುವ ಉದ್ದೇಶದಿಂದ ಜಮೆಯಾದ ಹಣವನ್ನು ಖಾತೆಯಲ್ಲಿಯೇ ಉಳಿಸಿಕೊಳ್ಳಲಾಗಿತ್ತು. ಇದೀಗ ಹಣವನ್ನು ಸಂಪೂರ್ಣವಾಗಿ ಸಂತ್ರಸ್ತರಿಗೆ ಹಂಚಲು ನಿರ್ಧರಿಸಿದ್ದು, ಬುಧವಾರ ಮಧ್ಯಾಹ್ನ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಪಟ್ಟಿಯಂತೆ ಹಣ ಹಂಚಿಕೆ:
ಸರಕಾರದ ಸಮೀಕ್ಷೆ ಪ್ರಕಾರ 203 ಮನೆಗಳು ಸಂಪೂರ್ಣ ಹಾನಿ(ಎ ಕೆಟಗೆರಿ), 55 ಭಾಗಶಃ ಹಾನಿ (ಬಿ ಕೆಟಗೆರಿ) ಹಾಗೂ 31 ಅಲ್ಪಸ್ವಲ್ಪ ಹಾನಿ(ಸಿ ಕೆಟಗೆರಿ) ಒಟ್ಟು 289 ಮನೆಗಳೆಂದು ಗುರುತಿಸಲಾಗಿತ್ತು. ಬಳಿಕ 10 ಮನೆಗಳು ಬಿಟ್ಟು ಹೋಗಿದ್ದು ಪುನರ್ ಪರಿಶೀಲನೆ ನಡೆಸಿದ್ದು, ಇದೀಗ ಎ ಕೆಟಗರಿಯಲ್ಲಿ 210 ಮನೆಗಳು, ಬಿ ಕೆಟಗೆರಿ 58 ಮನೆಗಳು ಹಾಗೂ ಸಿ ಕೆಟಗೆರಿಯಲ್ಲಿ 31 ಮನೆಗಳನ್ನು ಸಂತ್ರಸ್ತರ ಪಟ್ಟಿಯಲ್ಲಿ ಗುರುತಿಸಲಾಯಿತು.
ಕಾಳಜಿ ಫಂಡ್‌ನಲ್ಲಿ 2,66,10,335 ಕೋ. ರೂ. ದಾನಿಗಳಿಂದ ಜಮೆಯಾಗಿದ್ದು ಹಾಗೂ ಬಡ್ಡಿ 7,87,979 ಒಟ್ಟು 2,73,98,315 ಕೋ. ರೂ. ಸಂಗ್ರಹಿಸಲಾಗಿದೆ. ಎ ಕೆಟಗರಿಯ 210 ಮನೆಗಳಿಗೆ ತಲಾ ಒಂದು ಲಕ್ಷ ರೂ., ಬಿ. ಕೆಟಗರಿಯ 58 ಮನೆಗಳಿಗೆ 80 ಸಾವಿರ ರೂ., ಸಿ. ಕೆಟಗರಿಯ 31 ಮನೆಗಳಿಗೆ ತಲಾ 56,500 ರೂ. ವಿತರಿಸಲಾಗುತ್ತದೆ.
ಫಲಾನುಭವಿಗಳಿಗೆ ಚೆಕ್ ಮೂಲಕವೇ ಹಣವನ್ನು ವಿತರಿಸುತ್ತಿದ್ದು, ಅವರಿಂದ ಸೂಕ್ತ ದಾಖಲೆಯನ್ನು ಪಡೆಯಲು ಸಮಿತಿ ನಿರ್ಧರಿಸಿದೆ.