ತಾಲೂಕು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕಾರಿಣಿ ಸಭೆ

ಬೆಳ್ತಂಗಡಿ: ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಚಿಂತನೆಯಡಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಕಾರ್ಯನಿರ್ವಹಿಸುತ್ತಿದೆ. ಪ್ರತಿ ಯೋಜನೆಗಳೂ ಸರ್ವ ಸಮುದಾಯವನ್ನು ತಲುಪಿಸುವ ಮುಖೇನ ಸಮಾಜದ ರಕ್ಷಣೆ, ಸಮಾಜದ ಅಭಿವೃದ್ಧಿಯೇ ಬಿಜೆಪಿ ಪಕ್ಷದ ಧ್ಯೇಯ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಬಿಜೆಪಿ ಕಚೇರಿಯಲ್ಲಿ ಸೋಮವಾರ ಜರುಗಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಥಮ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.

ಕಳೆದ 80 ವರ್ಷಗಳಲ್ಲಿ ಕಾಂಗ್ರೆಸ್ ಸರಕಾರದಿಂದ ಹಾಗೂ ಕಳೆದ 7 ವರ್ಷಗಳಿಂದ ಕೇಂದ್ರದ ಬಿಜೆಪಿ ಸರಕಾರ ಅಲ್ಪಸಂಖ್ಯಾತರಿಗೆ ನೀಡಿದ ಅನುದಾನ ತುಲನೆ ಮಾಡಿದಾಗ ಹತ್ತು ಪಟ್ಟು ಹೆಚ್ಚು ಅನುದಾನ ನೀಡಿರುವ ಸರಕಾರ ಬಿಜೆಪಿ ಎಂಬುದನ್ನು ಸರಕಾರದ ಪರವಾಗಿ ಬಹಿರಂಗವಾಗಿ ಚರ್ಚೆ ನಡೆಸಲು ಸಿದ್ಧ ಎಂದರು.
ಕಾಂಗ್ರೆಸ್ ಸರಕಾರ ಕೇವಲ ಮತಬ್ಯಾಂಕ್‌ಗಾಗಿ ಅಲ್ಪಸಂಖ್ಯಾತ ಸಮುದಾಯವನ್ನು ಬಳೆಸಿಕೊಂಡಿದೆ. ಸುಳ್ಳು ರಾಜಕೀಯ, ಜಾತಿ ರಾಜಕೀಯ ನಡೆಸುತ್ತಾ ಬಂದಿರುವ ಕಾಂಗ್ರೆಸ್ ಯಾವೊಬ್ಬ ಅಲ್ಪಸಂಖ್ಯಾತ ನಾಯಕರನ್ನೂ ದೇಶದಲ್ಲಿ ಉತ್ತಮ ಸ್ಥಾನಮಾನ ಕೊಡಿಸಿದ ಉದಾಹರಣೆಗಳಿಲ್ಲ. ಎಲ್ಲಾ ಸಮುದಾಯವನ್ನು ಒಗ್ಗೂಡಿಸಿ ಅಭಿವೃದ್ಧಿ ಪಥದತ್ತ ಸಾಗುವುದೇ ಬಿಜೆಪಿ ಧ್ಯೇಯ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಮಾತನಾಡಿ, ಬಿಜೆಪಿ ವಿಚಾರಧಾರೆಯಂತೆ ಅಭಿವೃದ್ಧಿಯಲ್ಲಿ ರಾಜಿ ಇಲ್ಲದೆ ಎಲ್ಲಾ ಸಮುದಾಯವನ್ನು ಒಗ್ಗೂಡಿಸಿ ಮುನ್ನಡೆಸುತ್ತಿರುವ ಶಾಸಕ ಹರೀಶ್ ಪೂಂಜ ಕಾರ್ಯವೈಖರಿಯನ್ನು ಜನ ಒಪ್ಪಿದ್ದಾರೆ. ಆದರೆ ಕಾಂಗ್ರೆಸ್ ಭಯದ ವಾತಾವರಣ ಸೃಷ್ಟಿಸಿ, ಮತ ಪಡೆದು ದುರಾಡಳಿತ ನಡೆಸಿರುವುದನ್ನು ಕಂಡು ಜನ ರೋಸಿಹೋಗಿದ್ದಾರೆ. ಮುಂದೆಯೂ ತಾಲೂಕಿನಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್, ತಾಲೂಕು ಉಪಾಧ್ಯಕ್ಷರಾದ ಕೃಷ್ಣಯ್ಯ ಆಚಾರ್ಯ, ಸೀತಾರಾಮ್ ಬೆಳಾಲು, ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾಯದರ್ಶಿ ಸೆಲೆಸ್ಟಿನ್ ಡಿಸೋಜ, ತಾ.ಪಂ. ಸದಸ್ಯ ಜೋಯಲ್ ಮೆಂಡೋನ್ಸಾ ಉಪಸ್ಥಿತರಿದ್ದರು. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅರುಣ್ ಕ್ರಾಸ್ತ ಸ್ವಾಗತಿಸಿದರು.

error: Content is protected !!