ನ.4ರಂದು‌‌ ಬೆಳ್ತಂಗಡಿ ಕಾಳಜಿ ಫಂಡ್ ನಿಂದ 2.73 ಕೋಟಿ ರೂ. ಪರಿಹಾರ ವಿತರಣೆ: ಧನಂಜಯ ರಾವ್

ಬೆಳ್ತಂಗಡಿ: ನ.‌4 ರಂದು ಬುಧವಾರದಂದು ಬೆಳ್ತಂಗಡಿ ಕಾಳಜಿ ಪ್ಲಡ್ ರಿಲೀಫ್ ಫಂಡ್ ವತಿಯಿಂದ 2.73 ಕೋಟಿ ರೂ. ಪರಿಹಾರ ಧನ ವಿತರಣೆ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ನಡೆಯಲಿದೆ ಎಂದು ಕಾಳಜಿ ಫ್ಲಡ್ ರಿಲೀಫ್ ಫಂಡ್ ಕಾರ್ಯದರ್ಶಿ ಬಿ.ಕೆ. ಧನಂಜಯ ರಾವ್ ತಿಳಿಸಿದರು.

ಅವರು ಬೆಳ್ತಂಗಡಿಯ ನಿರೀಕ್ಷಣಾ ಪ್ರವಾಸಿ ಬಂಗಲೆಯಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದರು.

ಸಮಾನ ಮನಸ್ಕರು ಸೇರಿಕೊಂಡು ನೆರೆ ಸಂದರ್ಭ ಸಂತ್ರಸ್ತ ಕುಟುಂಬಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕಾಳಜಿ ಬೆಳ್ತಂಗಡಿ ಫ್ಲಡ್ ರಿಲೀಫ್ ಫಂಡ್ ಸಮಿತಿಯನ್ನು ರಚಿಸಲಾಗಿತ್ತು. ಈ ತಂಡದಲ್ಲಿ ಎಲ್ಲಾ ಜಾತಿಯ, ಧರ್ಮದವರು ಇದ್ದಾರೆ. ಸಮಸ್ತ ದಾನಿಗಳ ಸಹಕಾರದಿಂದ ಸಂಗ್ರಹಿಸಲಾದ ಹಣವನ್ನು ಅರ್ಹ ಸಂತ್ರಸ್ತರಿಗೆ ವಿತರಿಸಲಾಗುತ್ತದೆ. ಸಂತ್ರಸ್ತರ ಪಟ್ಟಿಯಲ್ಲಿ ಮನೆ ಹಾನಿಯಾದವರ ಪಟ್ಟಿ ತಯಾರಿಸಿ ಎ, ಬಿ, ಸಿ, ಕೆಟಗರಿ ಮಾಡಲಾಗಿದೆ. ಸರಕಾರದ ಸಮೀಕ್ಷೆ ಪ್ರಕಾರ 203 ಮನೆಗಳು ಸಂಪೂರ್ಣ ಹಾನಿ(ಎ ಕೆಟಗೆರಿ), 55 ಭಾಗಶಃ ಹಾನಿ (ಬಿ ಕೆಟಗೆರಿ) ಹಾಗೂ 31 ಅಲ್ಪಸ್ವಲ್ಪ ಹಾನಿ(ಸಿ ಕೆಟಗೆರಿ) ಒಟ್ಟು 289 ಮನೆಗಳೆಂದು ಗುರುತಿಸಲಾಗಿತ್ತು. ಬಳಿಕ 10 ಮನೆಗಳು ಬಿಟ್ಟು ಹೋಗಿದ್ದು ಪುನರ್ ಪರಿಶೀಲನೆ ನಡೆಸಿದ್ದು, ಇದೀಗ ಎ ಕೆಟಗರಿಯಲ್ಲಿ 210 ಮನೆಗಳು, ಬಿ ಕೆಟಗೆರಿ 58 ಮನೆಗಳು ಹಾಗೂ ಸಿ ಕೆಟಗೆರಿಯಲ್ಲಿ 31 ಮನೆಗಳಿದೆ ಎಂದರು.
ಕಾಳಜಿ ಫಂಡ್‌ನಲ್ಲಿ 2,66,10,335 ಕೋ. ರೂ ಹಾಗೂ ಬಡ್ಡಿ 7,87,979 ಒಟ್ಟು 2,73,98,315 ಕೋ. ರೂ. ಸಂಗ್ರಹಿಸಲಾಗಿದೆ. ಎ ಕೆಟಗರಿಯ 210 ಮನೆಗಳಿಗೆ ತಲಾ ಒಂದು ಲಕ್ಷ ರೂ., ಬಿ. ಕೆಟಗರಿಯ 58 ಮನೆಗಳಿಗೆ 80 ಸಾವಿರ ರೂ., ಸಿ. ಕೆಟಗರಿಯ 31 ಮನೆಗಳಿಗೆ ತಲಾ 56,500 ರೂ. ವಿತರಿಸಲಾಗುವುದು. ಫಲಾನುಭವಿಗಳಿಗೆ ಚೆಕ್ ಮೂಲಕವೇ ಹಣವನ್ನು ವಿತರಿಸುತ್ತಿದ್ದು, ಅವರಿಂದ ಸೂಕ್ತ ದಾಖಲೆಯನ್ನು ಪಡೆಯಲಾಗುತ್ತಿದೆ. ವಿತರಣೆ ಸಂಪೂರ್ಣ ಪಾರದರ್ಶಕವಾಗಿ ನಡೆಯಲು ಕ್ರಮಕೈಗೊಳ್ಳಲಾಗಿದೆ ಎಂದರು.
ನ.೪ ಮಧ್ಯಾಹ್ನ 2 ಗಂಟೆಗೆ ಬೆಳ್ತಂಗಡಿ ಶ್ರೀ ಮಂಜುನಾಥ ಕಲಾ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕ್ರತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ, ಸಂಸದ ನಳಿನ್ ಕುಮಾರ್ ಕಟೀಲು, ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಎಸ್.ಕೆ.ಡಿ.ಆರ್.ಡಿ.ಪಿ. ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಹೆಚ್. ಮಂಜುನಾಥ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಫಲಾನುಭವಿಗಳಷ್ಟೇ ಭಾಗವಹಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿವೀರೇಂದ್ರ ಹೆಗ್ಗಡೆಯವರು, ಶಾಸಕರು ಹಾಗೂ ಅನೇಕ ದಾನಿಗಳು ಕಾಳಜಿ ಫಂಡ್‌ಗೆ ಹಣ ನೀಡಿದ್ದು, ಅವರ ಸಹಕಾರವನ್ನು ಫಂಡ್ ಸಮಿತಿ ಸ್ಮರಿಸುತ್ತದೆ. ದಾನಿಗಳ ಕೊಡುಗೆಯೂ ಅಮೂಲ್ಯವಾಗಿದ್ದು, ಸರಕಾರಿ ನಿಯಮಗಳ ಕಾರಣ ಅವರನ್ನು ಆಹ್ವಾನಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಸಮಿತಿಯ ಕೋಶಾಧಿಕಾರಿ ನಂದಕುಮಾರ್, ಸದಸ್ಯರಾದ ಉದ್ಯಮಿಗಳಾದ ರಾಜೇಶ್ ಪೈ ಉಜಿರೆ, ಮೋಹನ್ ಕುಮಾರ್ ಉಜಿರೆ, ಜಯಕರ ಶೆಟ್ಟಿ ಉಪಸ್ಥಿತರಿದ್ದರು.

error: Content is protected !!