ಮಿನಿವಿಧಾನಸೌಧ ಆವರಣದಲ್ಲಿ ಕನ್ನಡ ರಾಜ್ಯೋತ್ಸವ

ಬೆಳ್ತಂಗಡಿ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಿನಿವಿಧಾನ ಸೌಧ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.


ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಮಹೇಶ್ ಜೆ., ಕನ್ನಡಿಗರ ಸ್ವಾಭಿಮಾನ ಸಂಕೇತವಾದ ರಾಜ್ಯೋತ್ಸವ ಆಚರಣೆ ನಾಡಿನ ಉದ್ದಗಲಕ್ಕೂ ಹೆಮ್ಮೆಯ ಸಂಕೇತ. ಅಲ್ಲಲ್ಲಿ ಚದುರಿದ್ದ ಕರ್ನಾಟಕವನ್ನು ಒಗ್ಗೂಡಿಸಿ ಅದಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ದಿನ. ಕನ್ನಡಿಗರ ಜನಶಕ್ತಿ ಮತ್ತು ಕೌಶಲ್ಯದಿಂದ ಕರ್ನಾಟಕ ಪ್ರಗತಿಯ ಉತ್ತುಂಗಕ್ಕೇರುತ್ತಿದ್ದು, ಕನ್ನಡದ ಏಳಿಗೆಗಾಗಿ ಕನ್ನಡಿಗರು ಪ್ರತಿನಿತ್ಯ ಶ್ರಮಿಸೋಣ ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯಿತಿ ಅಧ್ಯಕ್ಷೆ ದಿವ್ಯಜ್ಯೋತಿ, ನಾಡು ನುಡಿಯನ್ನು ಪ್ರೀತಿಸುವವರ ಪಾಲಿಗೆ ಇಂದು ಸಂಭ್ರಮದ ಕನ್ನಡ ರಾಜ್ಯೋತ್ಸವವಾಗಬೇಕಿತ್ತು. ಆದರೆ ಕೋವಿಡ್ ನಿಯಮನುಸಾರ ಸರಳವಾಗಿ ಆಚರಿಸಬೇಕಾಗಿ ಬಂದಿದೆ. ಆದರೂ ಕನ್ನಡ ಭಾಷಾಭಿಮಾನದಿಂದ ನಾವೆಲ್ಲ ಒಂದೇ ಎಂಬ ಭಾವನೆಯೊಂದಿಗೆ ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ದುಡಿಯೋಣ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ನಮ್ಮ ಕರುನಾಡು ಎಂಬ ದೇಶಾಭಿಮಾನ ಬೆಳೆಸುವ ಮೂಲಕ ಸತ್ಪ್ರಜೆಗಳಾಗಿಸೋಣ ಎಂದರು.
ನಿವೃತ್ತ ಸೈನಿಕ ಎಂ.ಆರ್.ಜೈನ್, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಸಿಡಿಪಿಒ ಪ್ರಿಯಾ ಆಗ್ನೆಸ್, ಪ.ಪಂ. ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ಸದಸ್ಯರಾದ ರಜನಿ ಕುಡ್ವ, ಗೌರಿ ಉಪಸ್ಥಿತರಿದ್ದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಕೆ., ಸ್ವಾಗತಿಸಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಾಂತ್ ವಂದಿಸಿದರು. ಶಿಕ್ಷಕ ರಮೇಶ್ ಪೈಲಾರು ಕಾರ್ಯಕ್ರಮ ನಿರೂಪಿಸಿದರು.

error: Content is protected !!