ಕೊರಗಜ್ಜನ ಸ್ತುತಿಸಿದ ಬಾಲಕನ ಗಾಯನಕ್ಕೆ ಜನಮೆಚ್ಚುಗೆ: ಹಾಡಿನ ಹಿಂದಿದೆ‌ ನೋವಿನ ಕಥೆ

ಉಡುಪಿ: ಬಾಲಕನೊಬ್ಬ ಕೊರಗಜ್ಜನ ಸ್ತುತಿಸಿದ ವಿಡಿಯೊ ದ.ಕ., ಉಡುಪಿ ಸೇರಿ ರಾಜ್ಯಾದ್ಯಂತ ಭಾರೀ ಸುದ್ದಿ ಮಾಡುತ್ತಿದೆ. ಬಾಲಕ ಭಕ್ತಿಗೀತೆ ಹಾಡುತ್ತಿದ್ದುದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು. ಇದನ್ನು ಗಮನಿಸಿದ ಕೆಲ ಸಂಘ-ಸಂಸ್ಥೆಗಳು ಬಾಲಕನ ಮಾಹಿತಿಯಿದ್ದರೆ ತಿಳಿಸುವಂತೆ ಪ್ರಕಟಣೆಯನ್ನೂ ನೀಡಿದ್ದರು. ಈ ವಿಡಿಯೋದ ಬೆನ್ನತ್ತಿದ ‘ಪ್ರಜಾಪ್ರಕಾಶ’ ತಂಡಕ್ಕೆ ಹಲವು ಅಚ್ಚರಿಯ ಮಾಹಿತಿಗಳು ಲಭ್ಯವಾಗಿವೆ.


ಐದು ವರ್ಷ ನಡೆದಾಡುತ್ತಿರಲಿಲ್ಲ!:
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರು- ಹೆಬ್ರಿ ನಡುವಿನ ಮೂಜೂರು ಸಮೀಪದ ನಿವಾಸಿ ಪೂವಪ್ಪ-ಲೋಲಾಕ್ಷಿ ದಂಪತಿಗಳ ಒಂದು ಹೆಣ್ಣು ಎರಡು ಗಂಡು ಮಕ್ಕಳಲ್ಲಿ ಹಾಡು ಹಾಡಿದಾತ ಕೊನೆಯವ. ಈ ಏಳು ವರ್ಷದ ಪೋರನ ಹೆಸರು ಕಾರ್ತಿಕ್. ಐದು ವರ್ಷದವರೆಗೆ ನಡೆದಾಡಲೂ ಸಾಧ್ಯವಾಗದ ಪರಿಸ್ಥಿತಿ ಈತನದ್ದಾಗಿತ್ತು. ಮನೆಯವರು ಮಣಿಪಾಲ, ಮಂಗಳೂರು ಅಲ್ಲದೆ ಹಲವಾರು ಆಸ್ಪತ್ರೆಗಳಿಗೆ ತೆರಳಿ, ಚಿಕಿತ್ಸೆ ಕೊಡಿಸಿದರೂ ಪ್ರಯತ್ನ ಫಲಿಸಲಿಲ್ಲ. ಕೊನೆಗೆ ದೈವ ದೇವರುಗಳ ಸೇವೆಯನ್ನೂ ಮಾಡಿಸಿ ಕಂಗಾಲಾದರು. ಆದರೆ ಕಳೆದ ಎರಡು ವರ್ಷಗಳಿಂದ ಈತ, ನಡೆದಾಡಲು ಪ್ರಾರಂಭಿಸಿದ್ದಾನೆ.
ಕೊರಗಜ್ಜನ ಕೃಪೆ!:
ಈತ ಕೊರಗಜ್ಜನ ಮೇಲೆ ಅಪಾರವಾದ ದೈವಭಕ್ತಿ ಹೊಂದಿದ್ದು, ಕೊರಗಜ್ಜನ ಹಾಡುಗಳನ್ನು ಬಾಯಿಪಾಠ ಮಾಡಿ ಸದಾ ಗುನುಗುನಿಸುತ್ತಿರುತ್ತಾನೆ ಎನ್ನುತ್ತಾರೆ ಮನೆಯವರು. ಕಾಕತಾಳೀಯವೆಂಬಂತೆ ಕೊರಗಜ್ಜನ ಕೃಪೆ ಇವನ ಮೇಲಿದೆ ಎಂದು ಮನೆಯವರು ಹೇಳುತ್ತಾರೆ. ಆದ್ದರಿಂದಲೇ ಆತ ನಡೆಯುವಂತಾಗಿ, ಹಾಡನ್ನು ಹಾಡುವಂತಾಗಿದೆ ಎಂಬುದು ಅವರ ನಂಬಿಕೆ.
ಹಾಡಲು ತರಬೇತಿ ಪಡೆದಿಲ್ಲ:
ಕೊರಗಜ್ಜನ ಹಾಡನ್ನು ತನ್ಮಯತೆಯಿಂದ, ಉಚ್ಚ ಸ್ಥಾಯಿಯಲ್ಲಿ ಹಾಡಲು ಪ್ರಯತ್ನಿಸುವ ಈತ ಯಾವುದೇ ರೀತಿಯ ಸಂಗೀತ ತರಬೇತಿ ಪಡೆದಿಲ್ಲ. ಈತನ ಅಕ್ಕ ರಕ್ಷಿತಾ ಕೊಂಚ ಮಟ್ಟಿಗೆ ಹಾಡನ್ನು ತಿಳಿಸಿಕೊಡುವ ಪ್ರಯತ್ನವನ್ನಷ್ಟೇ ಮಾಡಿದ್ದಾರೆ. ಆದರೂ ಕಾರ್ತಿಕ್ ಜನಮೆಚ್ಚುವಂತೆ ಹಾಡುವ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ನಂಬಿಕೆ ಹುಸಿ ಮಾಡದ ಕೊರಗಜ್ಜ:
ಮುಗ್ದ ಮನಸ್ಸಿನಿಂದ ಸ್ತುತಿಸಿದರೆ ಕೊರಗಜ್ಜ ಒಲಿಯುತ್ತಾನೆ ಎಂಬ ತುಳು ನಾಡ ಜನರ ನಂಬಿಕೆಗೆ ಇಂಬು ಕೊಡುವಂತೆ ಕೊರಗಜ್ಜನ ಕುರಿತು ಹಾಡಿದ ಕಾರ್ತಿಕ್ ಬದುಕಿನಲ್ಲಿ ಬದಲಾವಣೆಗಳಾಗಿವೆ. ಆದರೂ ಕಾರ್ತಿಕ್ ಕುಟುಂಬ ಮಾತ್ರ ತೀವ್ರ ಬಡತನದಲ್ಲಿದ್ದು, ಈತನ ಅಣ್ಣ ಹಾಗೂ ತಂದೆಯ ಕೂಲಿ ಕೆಲಸದಿಂದ ಬಂದ ಹಣದಲ್ಲಿ ಜೀವನ ನಿರ್ವಹಣೆ ಸಾಗುತ್ತಿದೆ.


ಸರಕಾರಿ ಸವಲತ್ತಿನ ನಿರೀಕ್ಷೆ:
ಈಗಾಗಲೇ ಕಾರ್ತಿಕ್ ನ ಆರೋಗ್ಯ ಪಾಲನೆಗಾಗಿ ಕುಟುಂಬ ಸಾಲ ಮಾಡಿದ್ದು, ದೈನಂದಿನ ಜೀವನ ನಿರ್ವಹಣೆಗೆ ಕಷ್ಟಪಡುತ್ತಿದೆ. ಈ ಕುಟುಂಬಕ್ಕೆ ಸರಕಾರ ಹಾಗೂ ಸಂಘ-ಸಂಸ್ಥೆಗಳು ಸಹಾಯಹಸ್ತ ನೀಡಿ ಪ್ರೋತ್ಸಾಹಿಸಿದಲ್ಲಿ ಈತನ ಕುಟುಂಬ ಉತ್ತಮ ರೀತಿಯಲ್ಲಿ ಜೀವನ ನಡೆಸುವ ಜೊತೆಗೆ ಆತನ ಪ್ರತಿಭೆ ದೊಡ್ಡ ಮಟ್ಟದಲ್ಲಿ ಅನಾವರಣಗೊಳ್ಳಲು ಸಹಾಯಕವಾಗಲಿದೆ. ಬಾಲಕನಿಗೆ ಸಹಾಯ ಮಾಡುವ ಇಚ್ಛೆಯುಳ್ಳವರು ಆತನನ್ನು (7022145910) ಸಂಪರ್ಕಿಸಬಹುದು.
ಈ ಬಾಲಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯ ಮಾಡಿದಲ್ಲಿ ಇನ್ನೂ ಹೆಚ್ಚಿನ ಸಾಧನೆಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಎಲೆಮರೆ ಕಾಯಿಯಂತೆ ಅದೆಷ್ಟೋ ಪ್ರತಿಭೆಗಳು ಇವೆ. ಇವರಲ್ಲಿ ಕೆಲವರು ಮಾತ್ರ ಆಗೊಮ್ಮೆ, ಈಗೊಮ್ಮೆ ಸಾಮಾಜಿಕ ಜಾಲತಾಣದ ವೇದಿಕೆ ಬಳಸಿಕೊಂಡು ಕಾಣಸಿಗುತ್ತಾರೆ. ಬಳಿಕ ಯಾವುದೇ ದೊಡ್ಡ ವೇದಿಕೆ ಸಿಗದೆ ಹೊರಜಗತ್ತಿಗೆ ತಿಳಿಯದಂತಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭೆಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗುವಂತಾಗಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿರುವ ಕಾರ್ತಿಕ್, ಗಾಯನದ ಮೂಲಕ ಹೆಚ್ಚಿನ ಸಾಧನೆ ಮಾಡಲಿ ಎನ್ನುವುದು ‘ಪ್ರಜಾಪ್ರಕಾಶ’ ತಂಡದ
ಆಶಯವಾಗಿದೆ.

error: Content is protected !!