‘ಯಕ್ಷಗಾನ’ದಲ್ಲಿ ಕನ್ನಡ ಡಿಂಡಿಮ: ಜನಮನ ಗೆದ್ದ ಯಕ್ಷ ‘ನಾಡಗೀತೆ’

ಬೆಳ್ತಂಗಡಿ: ಯಕ್ಷಗಾನ ಶೈಲಿಯಲ್ಲಿ ಮೂಡಿಬಂದ ನಾಡಗೀತೆ ರಾಜ್ಯೋತ್ಸವದ ಸಂದರ್ಭ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕುಂದಾಪುರ ಬಳಿಯ ಗೋಳಿಯಂಗಡಿ ಕಲಾಶ್ರೀ ಯಕ್ಷನಾಟ್ಯ ಬಳಗದವರು ನಾಡಗೀತೆಯನ್ನು ಯಕ್ಷರೂಪಕದ ಮೂಲಕ ಪ್ರಸ್ತುತಪಡಿಸಿರುವುದು ಜನಮೆಚ್ಚುಗೆಗೆ ಪಾತ್ರವಾಗಿದೆ.


ವೈರಲ್ ಆಗಿರುವ ಈ ವಿಡಿಯೋ 2020ರ ಸ್ವಾತಂತ್ರ್ಯ ದಿನಕ್ಕಾಗಿ ‘ಯಕ್ಷಭಾರತಿ’ ಕಲ್ಪನೆಯಡಿ ಕಾರ್ಯಕ್ರಮ ಸಂಯೋಜಿಸಿದ್ದರು. ರಾಷ್ಟ್ರ, ರಾಜ್ಯದ ಬಗ್ಗೆ ಅಭಿಮಾನ ಮೂಡಿಸುವ ಪ್ರಯತ್ನದಿಂದ ರಚಿಸಲಾಗಿತ್ತು. ಹಿಮ್ಮೇಳದಲ್ಲಿ ಯುವ ಭಾಗವತ ಗಣೇಶ್ ಆಚಾರ್ಯ ಜಾನುವಾರುಕಟ್ಟೆ ಅವರ ಹಾಡಿಗೆ ಪ್ರದೀಪ್ ಮುದ್ದೂರು ಮದ್ದಳೆ ನುಡಿಸಿದ್ದು, ನಾಗರಾಜ ಆಚಾರ್ಯ ಚೆಂಡೆಯಲ್ಲಿ ಸಹಕರಿಸಿದ್ದಾರೆ. ಮುಮ್ಮೇಳದಲ್ಲಿ ತಂಡದ ಪ್ರಮುಖ ಪ್ರವೀಣ್ ಟಿ. ಆಚಾರ್ಯ, ವಿಶ್ವನಾಥ್ ಕಿರಾಡಿ, ನಾಗರಾಜ ದೇವಲ್ಕಂದ, ರಘು ಆಚಾರ್ಯ ಅಮಾಸೆಬೈಲು ಹಾಗೂ ಕುಮಾರಿ ವೈಷ್ಣವಿ ನಾಟ್ಯ ಪ್ರದರ್ಶನ ನೀಡಿದ್ದಾರೆ. ನುರಿತ ಕಲಾವಿದರನ್ನು ಒಳಗೊಂಡ ತಂಡ ಇದಾಗಿದ್ದು, ರಾಜ್ಯದಾದ್ಯಂತ ವಿವಿಧ ಪ್ರದರ್ಶನಗಳನ್ನು ನೀಡುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ ಪ್ರವೀಣ್ ಟಿ. ಆಚಾರ್ಯ ನೇತೃತ್ವದಲ್ಲಿ, ಕಲಾಶ್ರೀ ಯಕ್ಷ ನಾಟ್ಯ ಬಳಗವನ್ನು ರಚಿಸಿಕೊಂಡು ಯಕ್ಷನಾಟ್ಯ ವೈಭವ, ಗಾನ ವೈಭವವನ್ನು ಪ್ರದರ್ಶಿಸುತ್ತಿದ್ದಾರೆ. ಡಿಸೆಂಬರ್‍ನಲ್ಲಿ ತಂಡ ವಾರ್ಷಿಕೋತ್ಸವ ಆಚರಿಸುವ ಸಂದರ್ಭ, ತೆರೆಮರೆಯಲ್ಲಿರುವ ಸರಿದಿರುವ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡುತ್ತಿದೆ. ಸಾಮಾಜಿಕ ಕಾರ್ಯಗಳಲ್ಲೂ ಬಳಗ ತೊಡಗಿಸಿಕೊಂಡಿದೆ. ಸಾರ್ವಜನಿಕ ಕಾರ್ಯಕ್ರಮ ಪ್ರದರ್ಶನಗಳಿಗಾಗಿ ಪ್ರವೀಣ್ ಟಿ. ಆಚಾರ್ಯ(9740435661) ಅವರನ್ನು ಸಂಪರ್ಕಿಸಬಹುದಾಗಿದೆ.


ರಾಷ್ಟ್ರಕವಿ ಕುವೆಂಪು ಅವರು 1924ರಲ್ಲಿ ‘ಕಿಶೋರಚಂದ್ರವಾಣಿ’ ಕಾವ್ಯನಾಮದಡಿ ಕಾವ್ಯ ರಚಿಸಿದ್ದರು. ಈ ಗೀತೆಯನ್ನು ರಾಜ್ಯ ಸರಕಾರ 2004 ಫೆ.23ರಂದು ಅಧಿಕೃತವಾಗಿ ನಾಡಗೀತೆ ಎಂದು ಘೋಷಣೆ ಮಾಡಿತು. ಇದೇ ಗೀತೆಯನ್ನು ಯಕ್ಷಗಾನದಲ್ಲಿ ಪ್ರಸ್ತುತಪಡಿಸಿರುವ ಈ ವಿನೂತನ ಪ್ರಯತ್ನಕ್ಕೆ ಭಾರೀ ಜನಮೆಚ್ಚುಗೆ ವ್ಯಕ್ತವಾಗಿದೆ.

error: Content is protected !!