‘ಭುವನೇಶ್ವರಿ’ಗೆ ಅಕ್ಷರ ಮಾಲೆಯ ಹಾರ!: ಕನ್ನಡಿಗರೊಬ್ಬರ ವಿನೂತನ ಪ್ರಯತ್ನ

ಬೆಂಗಳೂರು: ‘ಕನ್ನಡವೆಂದರೆ ಬರಿ ನುಡಿಯಲ್ಲ, ಹಿರಿದಿದೆ ಅದರರ್ಥ’ ಎಂದು ನಿಸಾರ್ ಅಹಮ್ಮದ್ ಅವರು ತಮ್ಮ ಕವನದಲ್ಲಿ ತಿಳಿಸಿದ್ದರು. ಇದೇ ಮಾತನ್ನು ರುಜು ಮಾಡುವಂತೆ ಬೆಂಗಳೂರಿನ ಶಿವಸ್ವಾಮಿ ನುಣ್ಣೂರು ಅವರು ಕನ್ನಡ ವರ್ಣ ಮಾಲೆಯ ಅಕ್ಷರಗಳನ್ನು ಪೋಣಿಸಿ ವಾಕ್ಯರಚನೆ ಮಾಡುವ ಮೂಲಕ ಭುವನೇಶ್ವರಿಗೆ ಅಕ್ಷರ ಮಾಲೆಯ ಹಾರವನ್ನೇ ಹಾಕಿ ವಿನೂತನ ರೀತಿಯಲ್ಲಿ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ಅವರು ಬರೆದಿರುವ ಸಾಲುಗಳು ಇಂತಿವೆ…
‘ಭುವನೇಶ್ವರಿ’ಗೆ ಅಕ್ಷರ ‘ಮಾಲೆ’ !
‘ಅ’ಮ್ಮನಂತೆ ಎಲ್ಲರನ್ನೂ ‘ಆ’ರೈಕೆ ಮಾಡುತ್ತಾ ‘ಇ’ರುವ ‘ಈ’ಜಗದ ಏಕೈಕ ಭಾಷೆ ಕನ್ನಡ. ನಮ್ಮೆಲ್ಲರಿಗೆ ‘ಉ’ಸಿರಾಗಿ, ಹಸಿದವರಿಗೆ ‘ಊ’ಟವಿತ್ತು ‘ಋ’ಣ ಭಾರವನ್ನ ‘ಎ’ತ್ತರಕ್ಕೆ ‘ಏ’ರಿಸಿದೆ. ‘ಐ’ತಿಹಾಸಿಕ ಭಾಷೆಗೆ ಅನ್ಯಭಾಷೆಯವರು ‘ಒ’ಗ್ಗರಣೆ ಹಾಕಿ ಕನ್ನಡದ ‘ಓ’ಘಕ್ಕೆ ಕುತ್ತು ತಂದಿದ್ದಾರೆ. ಆದರೂ ದಿವ್ಯ ’ಔ’ಷಧದಂತೆ ಭಾಷೆ ಮತ್ತಷ್ಟು ‘ಅಂ’ಕುರಿಸುತ್ತಲೇ ಇದೆ. ಭಾಷಾ ಶ್ರೀಮಂತಿಕೆಯಲ್ಲಿ ‘ಅಃ’ ಅಂತ ಬೆಳೆಯುತ್ತಲೇ ಇದೆ.
‘ಕ’ನ್ನಡ ‘ಖ’ಡ್ಗದಂತೆಯೇ ಹರಿತವಾಗಿದೆ. ಆದರೂ ‘ಗ’ಡಿಯಲ್ಲಿ ‘ಘಂ’ಟಾಘೋಷವಾಗಿ ಮಾತನಾಡಲು ಆಗುತ್ತಿಲ್ಲ. ಇನ್ನಾದರೂ ‘ಙ’ಕಾರಮಂ ಆಚೆಗೂ ಕನ್ನಡ ಶಬ್ದ ಮುಟ್ಟಲಿ. ‘ಚಂ’ದನದ ಸುಗಂಧ, ‘ಛಂ’ದಸ್ಸಿನ ಚಂದದ ‘ಜ’ತೆಗೆ ’ಝಂ’ಪಿಸುವ ಕನ್ನಡ ಭಾಷೆಗೆ ನಾವು ಸದಾ ಕೃತಜ್ಞರಾಗಿರಲೇಬೇಕು. ಕರ್ನಾಟಕದ ಮುಕು‘ಟ’ವಾಗಿರುವ ಕನ್ನಡವನ್ನ ಹ‘ಠ’ವಾಗಿ ಬಳಸಿ. ‘ಡಂ’ಗೂರ ಸಾರಿ, ‘ಢ’ಮರುಗವ ಬಾರಿಸಿ ಮುಖ್ಯಪ್ರಾ‘ಣ’ವಾಗಿಸೋಣ.
ಪರಭಾಷಿಗರ ಕಿವಿ ‘ತ’ಮಟೆಗೂ ನಮ್ಮ ನುಡಿಮುತ್ತುಗಳು ಕೇಳುವಂತಹ ಶಪ‘ಥ’ಗೈಯ್ಯೋಣ. ಹ‘ದ’ವಾದ ‘ಧ’ನಸ್ಸು ಹಿಡಿದು, ಜೀವ‘ನ’ದಿಯಲ್ಲಿ ಹುಟ್ಟು ಹಾಕುತ್ತಾ ಗುರಿ ಸೇರೋಣ. ‘ಪ’ರಪಂಚದಲ್ಲಿ ‘ಫ’ಲವತ್ತಾಗಿರುವ ಹಾಗೂ ‘ಬ’ಸವಳಿಯದ ’ಭ’ತ್ತದ ತೆನೆಯ ‘ಮ’ಮಕಾರದ ಭಾಷೆ ಕನ್ನಡ.
ವಿಜ‘ಯ’ವಾಣಿಯಾಗಿರುವ, ಸಾವಿ‘ರ’ದ ಕನ್ನಡ ಭಾಷೆಯು ಎಲ್ಲರ ನಾ‘ಲ’ಗೆ ಮೇಲೂ ಸಂ‘ವ’ಹನ ನಡೆಸುವಂತಾಗಲಿ. ಭುವನೇಶ್ವರಿಯ ಕಳ‘ಶ’ದಂತಿರುವ ಕನ್ನಡಕ್ಕೆ, ‘ಷ’ಟ್ಪದಿಗಳು ‘ಸ’ಲೀಸಾಗಿ ಉಚ್ಚರಿಸುವಂತಾಗಲಿ. ಸರ್ವರ ಸನಿ‘ಹ’ವೇ ಇದ್ದು, ಸಾವಿರಾರು ವರ್ಷ ಹೊ‘ಳ’ಪನ್ನ ಹೊಂದುತ್ತಲಿರಲಿ..
ಜೈ ಕರ್ನಾಟಕ ಮಾತೆ..
ಶಿವಸ್ವಾಮಿ ನುಣ್ಣೂರು ಅವರು ಪ್ರಸ್ತುತ ಕನ್ನಡ ಸುದ್ದಿವಾಹಿನಿ ಟಿ.ವಿ.9ನಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಹಲವು ಸುದ್ದಿ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಡಾ. ರಾಜ್‍ಕುಮಾರ್ ಅವರ ನೇತ್ರದಾನದಿಂದ ಪ್ರೇರೇಪಣೆ ಪಡೆದು ‘ನಮ್ಮ ಉಡುಗೊರೆ’ ಎಂಬ ಕಿರುಚಿತ್ರವನ್ನೂ ನಿರ್ಮಿಸಿ ಜನಮೆಚ್ಚುಗೆಗೆ ಪಾತ್ರವಾಗಿದ್ದಾರೆ. ನಟ ಲೂಸ್ ಮಾದ ಯೋಗಿ ನಟನೆಯ ‘ಅಲೆಮಾರಿ’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ, ‘ವಿದಾಯ’ ಸಿನಿಮಾದಲ್ಲಿ ಸಹನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಕಥೆ, ಕವನ ಹಾಗೂ ವ್ಯಂಗ್ಯ ಚಿತ್ರರಚನೆ ಇವರ ಮೆಚ್ಚಿನ ಹವ್ಯಾಸಗಳು.
ಪದಗಳನ್ನು ಪೋಣಿಸಿ ಪ್ರಾಸಬದ್ಧ ಸಾಲುಗಳನ್ನು ರಚಿಸುವುದೆಂದರೆ ಇವರಿಗೆ ಎಲ್ಲಿಲ್ಲದ ಪ್ರೀತಿ. ತಾವು ಕಾರ್ಯನಿರ್ವಹಿಸುವ ವಾಹಿನಿಯ ಸುದ್ದಿ ಪ್ರಸರಣದ ಸಂದರ್ಭ, ಅರ್ಥಗರ್ಭಿತ ಹಾಗೂ ವೈವಿಧ್ಯಮಯ ಸಾಲುಗಳನ್ನು ರಚಿಸಿ ಜನಮೆಚ್ಚುಗೆಗೂ ಪಾತ್ರವಾಗಿದ್ದಾರೆ. ಈ ಹಿಂದೆ ಖ್ಯಾತ ನಟ ಉಪೇಂದ್ರ ಅವರ ಹುಟ್ಟುಹಬ್ಬದ ಸಂದರ್ಭ, ಅವರು ನಟಿಸಿರುವ ಸಿನಿಮಾಗಳ ಪದಗಳನ್ನು ಜೋಡಿಸಿ ವಾಕ್ಯಗಳನ್ನು ರಚಿಸುವ ಮೂಲಕ ನಟ ಉಪೇಂದ್ರ ಹಾಗೂ ಅವರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರು. ಮುಂದೆ ಉಪೇಂದ್ರ ಅವರಿಗಾಗಿ ಕಥೆ ರಚಿಸಿ, ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಮಹದಾಸೆ ಶಿವಸ್ವಾಮಿ ಅವರದ್ದು.
ಕನ್ನಡ ಅಕ್ಷರಮಾಲೆಯನ್ನು ಮುತ್ತಿನ ಹಾರದಂತೆ ಪೋಣಿಸಿದ ಶಿವಸ್ವಾಮಿ ಅವರಿಗೆ ಪ್ರಜಾಪ್ರಕಾಶ ತಂಡದ ಶುಭಹಾರೈಕೆಗಳು. ಕನ್ನಡವನ್ನು ಹೆಚ್ಚು ಬಳಸುತ್ತಾ ವರ್ಷ ಪೂರ್ತಿ ಕನ್ನಡಿಗರಾಗಿಯೇ ಬಾಳೋಣ ಎಂಬುದು ಪ್ರಜಾಪ್ರಕಾಶ ತಂಡದ ಆಶಯ. ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

error: Content is protected !!