ದೇಶವನ್ನೇ ಹರಾಜು ಹಾಕಲಿದೆ ಬಿ.ಜೆ.ಪಿ.: ಗಂಗಾಧರ ಗೌಡ

ಇಂದಬೆಟ್ಟು: ಬಿ.ಜೆ.ಪಿ. ದೇಶದ ಜನರನ್ನು ನಂಬಿಸಿ ನಡು ನೀರಿನಲ್ಲಿ ಕೈಬಿಡುವ ಕಾರ್ಯದಲ್ಲಿ ತೊಡಗಿದೆ. ಈಗಾಗಲೇ ದೇಶದ ಆರ್ಥಿಕತೆ ಅಧೋಗತಿಗೆ ತಲುಪಿದ್ದು ನೇಪಾಳ, ಭೂತಾನ್‍ನ ಆರ್ಥಿಕತೆಯಷ್ಟಿದೆ. ಬಿಜೆಪಿಯವರು ನೋಟ್ ಬ್ಯಾನ್ ಮಾಡಿದರು, ಜನ ನಂಬಿದರು, ಜಿ.ಎಸ್.ಟಿ. ಹಾಕಿದರು, ಬುಲೆಟ್ ಟ್ರೈನ್ ಬಿಡುವುದಾಗಿ ಹೇಳಿದರು, ಕೊರೋನಾ ಸಂದರ್ಭ ದೀಪ ಉರಿಸಲು ಹೇಳಿದರು ಜನ ನಂಬಿ ಎಲ್ಲವನ್ನು ಮಾಡಿದರು. ಆದರೆ ಬಿಜೆಪಿ ಮಂಗಳೂರು ವಿಮಾನ ನಿಲ್ದಾಣ ಮೊದಲಾದವುಗಳನ್ನು ಹೊರಗುತ್ತಿಗೆಗೆ ನೀಡಿತು. ಇದು ಮಾತ್ರವಲ್ಲ ಹೀಗೆಯೇ ಎಲ್ಲಾ ಕ್ಷೇತ್ರದಲ್ಲೂ ಖಾಸಗೀಕರಣ ಮಾಡುತ್ತಾ ದೇಶದ ಯುವಜನತೆಗೆ ಉದ್ಯೋಗವಿಲ್ಲದಂತೆ ಮಾಡಿದೆ. ಹೀಗೆಯೇ ದೇಶದ ಪ್ರತಿಯೊಂದು ಕ್ಷೇತ್ರವನ್ನು ಮಾರಾಟ ಮಾಡುತ್ತಾ ಕೊನೆಗೆ ಬೆಳ್ತಂಗಡಿ, ಕರ್ನಾಟಕ ಸೇರಿ ಇಡೀ ದೇಶವನ್ನೇ ಹರಾಜು ಹಾಕಿ, ದೇಶದಲ್ಲಿ ಅರಾಜಕತೆ ಎದುರಾದರೂ ಅಚ್ಚರಿ ಪಡಬೇಕಿಲ್ಲ ಎಂದು ಮಾಜಿ ಶಾಸಕ ಗಂಗಾಧರ ಗೌಡ ಬಿ.ಜೆ.ಪಿ. ವಿರುದ್ಧ ಹರಿಹಾಯ್ದರು.

ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಗ್ರಾಮೀಣ ಬ್ಲಾಕ್ ಘಟಕದ ನೇತೃತ್ವದಲ್ಲಿ ಇಂದಬೆಟ್ಟು ಗ್ರಾಮ ಸಮಿತಿ ವತಿಯಿಂದ ಇಲ್ಲಿನ ಚರ್ಚ್ ಸಭಾಂಗಣದಲ್ಲಿ ಬೂತ್ ಸಮಿತಿ ಕಾರ್ಯಕರ್ತರ ಐಕ್ಯತಾ ಸಮಾವೇಶ ಹಾಗೂ ಇಂದಿರಾ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೆಳ್ತಂಗಡಿ ಪ್ರಸಕ್ತ ಇರುವ ಶಾಸಕರು ಕಾಂಗ್ರೆಸ್ ಮುಕ್ತ ಬೆಳ್ತಂಗಡಿ ಎಂದುಕೊಂಡು ಓಡಾಡುತ್ತಿದ್ದಾರೆ. ಆದರೆ ಅವರನ್ನು ನೋಡಿದಾಗ ನಾಟಕ ಕಂಪನಿಯವರಂತೆ ಕಾಣುತ್ತದೆ, ಅವರ ನಡೆ ನಾಟಕೀಯವಾಗಿದೆ. ಎಲ್ಲೆಡೆ ತಾವೇ ಅಭಿವೃದ್ಧಿ ಮಾಡಿದ್ದೇವೆ ಎಂದು ದೊಡ್ಡ ದೊಡ್ಡ ಬ್ಯಾನರ್ ಹಾಕುತ್ತಾರೆ. ಆದರೆ ಅಭಿವೃದ್ಧಿ ಕಾಮಗಾರಿ ಎಲ್ಲೂ ಕಾಣಿಸುವುದಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭ ಎಲ್ಲೆಡೆ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಜನರಿಗೆ ಕಾಂಗ್ರೆಸ್ ಪಕ್ಷದಿಂದ ಜೀವನ ಹಾಗೂ ಉತ್ತಮ ದಿನಗಳು ಲಭಿಸಿವೆ. ನೆಹರು, ಶಾಸ್ತ್ರಿ, ರಾಜೀವ್ ಗಾಂಧಿ ಮೊದಲಾದವರು ಅಭಿವೃದ್ಧಿ ನಡೆಸಿದ್ದರಿಂದ ದೇಶ ಇಂದಿಗೂ ಸುಭದ್ರವಾಗಿದೆ. ಇಂದಿರಾಗಾಂಧಿಯವರು ಶ್ರೀಮಂತರನ್ನು ಎದುರು ಹಾಕಿಕೊಂಡು ಭೂ ಸುಧಾರಣೆಯಂತಹಾ ಕಾನೂನು ಮಾಡಿ ಅದನ್ನು ದಿಟ್ಟವಾಗಿ ಜಾರಿಗೊಳಿಸಿದ ಪರಿಣಾಮ ಇಂದು ಜನತೆ ಸ್ವಾಭಿಮಾನದ ಜೀವನ ನಡೆಸುವಂತಾಗಿದೆ. ಇಲ್ಲವಾದಲ್ಲಿ ಗುಡಿಸಲಿನಲ್ಲಿ ಬದುಕುತ್ತಾ, ಶ್ರೀಮಂತರ ಮನೆಯಲ್ಲಿ ಇಂದಿಗೂ ಕೈಕಟ್ಟಿಕೊಂಡು ಬಡತನದಲ್ಲಿಯೇ ಜೀವನ ಸಾಗಿಸಬೇಕಿತ್ತು ಎಂದು ಜನರನ್ನು ಎಚ್ಚರಿಸಿದರು.
ಅಂಬೇಡ್ಕರ್ ಅವರು ಜೀವನಕ್ಕಾಗಿ ರಾಜಕೀಯಕ್ಕೆ ಬರಬೇಡಿ, ಜನರ ಜೀವನ ಬದಲಾಯಿಸಲು ರಾಜಕೀಯಕ್ಕೆ ಬನ್ನಿ ಎಂಬ ಮಾತನ್ನು ಹೇಳಿದ್ದರು. ಅದೇ ರೀತಿ ಬಡವರಿಗೆ ಆಸೆ ತೋರಿಸಿ, ಕೆಲಸ ಮಾಡುತ್ತೇನೆ ಎಂದು ನಂಬಿಸಿ, ಕಪಟ ನಾಟಕ ಮಾಡಿದಲ್ಲಿ ಆತ ಜನನಾಯಕನಾಗಲು ಸಾಧ್ಯವಿಲ್ಲ ಎಂದೂ ಹೇಳಿದ್ದರು. ಬೆಳ್ತಂಗಡಿ ಶಾಸಕರು ಇದೇ ರೀತಿ ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದಾರೆ. ತಾಲೂಕಿನ ಜನತೆ ನೆರೆಬಂದು ಸಂಕಷ್ಟದಲ್ಲಿದ್ದರು, ಜನತೆ ಸಹಾಯಾರ್ಥವಾಗಿ ಹಣವನ್ನು ನೀಡಿದರು. ಆದರೆ ಅದು ಬಳಕೆಯಾಗಲಿಲ್ಲ. ಇದನ್ನು ಪ್ರಶ್ನಿಸಿದ ಕಾಂಗ್ರೆಸ್‍ನ ನಡೆಯನ್ನೇ ತಪ್ಪು ಎಂಬಂತೆ ಬಿಂಬಿಸಿದರು. ನೆರೆ ಸಂತ್ರಸ್ತ ಜನರಿಗೆ ಮನೆ ಕಟ್ಟಿಸಿಕೊಡಲೂ ಸಾಧ್ಯವಾಗಿಲ್ಲ. ಕೊರೋನಾ ಸಂದರ್ಭದಲ್ಲೂ ತಾಲೂಕಿನ ಜನರಿಗೆ ಸೂಕ್ತ ಚಿಕಿತ್ಸೆ ಸಿಗದೆ ಒದ್ದಾಡುವಂತಾಗಿದೆ. ಇಂತಹಾ ಹತ್ತು ಶಾಸಕರು, ಹತ್ತು ಮೋದಿ ಬಂದರೂ ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಎಂದಿಗೂ ಆನೆಯಂತೆ ದೃಢವಾಗಿರುತ್ತದೆ. ಕಾರ್ಯಕರ್ತರು ಟೀಕೆಗಳಿಗೆ ಕಿವಿಗೊಡದೆ‌ ಪಕ್ಷದ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಯಾವುದೇ ಜಾತಿ, ಕೋಮು ಎಂಬ ತಾರತಮ್ಯ ಮಾಡದೆ ಜಾತ್ಯಾತೀತವಾಗಿ ಜನಾಭಿವೃದ್ಧಿ ಪರ ಕೆಲಸ ಮಾಡಬೇಕು. ಮುಂಬರುವ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಹುರಿದುಂಬಿಸಿದರು

ಗ್ರಾಮೀಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಂಜನ್ ಜಿ.ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ಒಂದು ಸಭೆಯಲ್ಲಿ ಶಾಸಕರ ಹರೀಶ್ ಪೂಂಜಾ ಅವರು ಬೆಳ್ತಂಗಡಿಯನ್ನು ಕಾಂಗ್ರೆಸ್ ಮುಕ್ತವನ್ನಾಗಿ ಮಾಡುವುದಾಗಿ‌ ತಿಳಿಸಿದ್ರು. ಅವರು ತಾಲೂಕಿನಲ್ಲಿ ನಡೆಯುವ ಅಕ್ರಮ ‌ಚಟುವಟಿಕೆಗಳಿಗೆ ಈ ರೀತಿ ಬೆಂಬಲ ನೀಡಿದರೆ, ಅವರೇ ಬಿಜೆಪಿಯಿಂದ ಮುಕ್ತರಾಗುತ್ತಾರೆ. ಬಿ.ಜೆ.ಪಿ. ಕಾರ್ಯಕರ್ತರು ಅವರಿಗೆ ಅಧಿಕಾರ ಕೊಟ್ಟು, ಏನು ಮಾಡುತ್ತಾರೆ ಎಂಬುದನ್ನು ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಮುಕ್ತವಾಗುವ ಮುನ್ನ, ಅವರು ಪಕ್ಷದಿಂದ ಮುಕ್ತರಾಗುವ ಸಾಧ್ಯತೆಯಿದೆ. ಆದ್ದರಿಂದ ಮೊದಲು ಅವರನ್ನು ಅವರು ಕಾಪಾಡಿಕೊಳ್ಳುವ ಕೆಲಸ ‌ಮಾಡಿಕೊಳ್ಳಲಿ ಎಂದರು.

ಶಾಸಕರು ಮೋದಿಯ ಹೆಸರಿಂದ ಅಲೆಯಿಂದ ಬಂದವರು, ಅವರ ಅಲೆ ಕಡಿಮೆಯಾಗುತ್ತಲೇ ಶಾಸಕರೂ ನಾಪತ್ತೆಯಾಗುತ್ತಾರೆ.
ತಾಲೂಕಿನಲ್ಲಿ ನೆರೆ ಉಂಟಾದ ಸಂದರ್ಭ, ಎರಡುವರೆ ಕೋಟಿಯ‌ ಲೆಕ್ಕ ಕೊಟ್ಟಿದ್ದರು. ಉಳಿದ ಹಣ ಏನಾಗಿದೆ ತಿಳಿದಿಲ್ಲ‌. ಇಲ್ಲಿಯವರೆಗೆ ಒಂದು ರೂ.ವನ್ನೂ‌ ಜನರಿಗೆ ನೀಡಲು ಸಾಧ್ಯವಾಗಿಲ್ಲ. ಹಿಂದೆ ಬಿ.ಜೆ.ಪಿ.‌, ಕಾಂಗ್ರೆಸ್ ಸೇರಿದಂತೆ ‌ಹಲವು ಶಾಸಕರು‌ ಮಾಡಿದ್ದಾರೆ, ಕನಿಷ್ಠ ಅಷ್ಟನ್ನಾದರೂ ಮಾಡಲಿ.‌ ಊರೆಲ್ಲ ಫ್ಲೆಕ್ ಹಾಕಿಸಿ ಹಣ‌ಬಿಡುಗಡೆಯಾಗಿದೆ ಎನ್ನುತ್ತಿದ್ದಾರೆ. ಆದರೆ ಅಧಿಕಾರಿಗಳಿಗೆ ಕೇಳಿದರೆ ಹಣ ಬಂದಿಲ್ಲ ಎನ್ನುತ್ತಾರೆ. ಒಟ್ಟಿನಲ್ಲಿ ಸುಳ್ಳು ಹೇಳಿಕೊಂಡು ‌ರಾಜಕಾರಣ ನಡೆಸುತ್ತಿದ್ದಾರೆ. ಸುಳ್ಳು ಅಭಿವೃದ್ಧಿಯನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ಶಾಸಕ ಹರೀಶ್ ಪೂಂಜ ನಡೆಯನ್ನು ಟೀಕಿಸಿದರು. ‌
ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾರ್ಯಕರ್ತರೇ ದುಡ್ಡು ಹಾಕಿ ಆಯೋಜನೆ ಮಾಡಿದ್ದಾರೆ.‌
ಈ ರೀತಿ ಸಂಘಟನೆ ಮಾಡಿದರೆ‌ ಮಾತ್ರ ಪಕ್ಷ ಬೆಳೆಸಲು ಸಾಧ್ಯ ಎಂದರು.

 

ವೇದಿಕೆಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ಕೆ., ಕೆಪಿಸಿಸಿ ಬೆಳ್ತಂಗಡಿ ಸಂಯೋಜಕ ಕೃಷ್ಣಮೂರ್ತಿ, ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ. ಮ್ಯಾಥ್ಯೂ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶೇಖರ ಕುಕ್ಕೇಡಿ, ಧರಣೇಂದ್ರ ಕುಮಾರ್ ಮತ್ತು ನಮಿತಾ ಕೆ., ತಾ.ಪಂ. ಮಾಜಿ ಸದಸ್ಯರಾದ ಮುಕುಂದ ಸುವರ್ಣ, ಪ್ರಶಾಂತ್ ವೇಗಸ್, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಪ್ರ. ಕಾರ್ಯದರ್ಶಿ ಪ್ರವೀಣ ವಿ.ಜಿ., ನಗರ ಪ್ರ. ಕಾರ್ಯದರ್ಶಿ ದಯಾನಂದ ಬೆಳಾಲು, ಬಂಗಾಡಿ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ, ಕಾರ್ಮಿಕ ಘಟಕದ ಮುಖಂಡ ಅಬ್ದುಲ್ ರಹಿಮಾನ್ ಪಡ್ಪು, ಅಲ್ಪಸಂಖ್ಯಾತ ಘಟಕ ತಾಲೂಕು ಅಧ್ಯಕ್ಷ ಅಶ್ರಫ್ ನೆರಿಯ, ಎಪಿಎಂಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್, ಮಹಿಳಾ ಘಟಕದ ಶೋಭಾ ನಾರಾಯಣ ಗೌಡ,
ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಸದಸ್ಯ ಜಗದೀಶ್ ಡಿ., ಇಂದಬೆಟ್ಟು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಇಬ್ರಾಹಿಂ, ಸದಸ್ಯ ಮಧುಕರ ಸುವರ್ಣ, ಗ್ರಾಮ ಸಮಿತಿ ಅಧ್ಯಕ್ಷ ಕೆ. ಜಯರಾಮ್ ಬಂಗಾಡಿ, ಕಾರ್ಯದರ್ಶಿ ರಾಜೇಶ್ ಪುದುಚೇರಿ, ಸಾಮಾಜಿಕ ಜಾಲತಾಣ ಸಂಚಾಲಕ ಅಬ್ದುಲ್ ಸಮದ್, ಬೂತ್ ಸಮಿತಿ ಅಧ್ಯಕ್ಷರಾದ ವೀರಪ್ಪ ಮೊಯಿಲಿ, ಗಫೂರ್ ಸಾಹೇಬ್, ಇಸ್ಮಾಯಿಲ್, ಜಾನ್ಸನ್ ಸಿ.ವಿ. ಉಪಸ್ಥಿತರಿದ್ದರು.

error: Content is protected !!