ಯಕ್ಷಕವಿ ಪಾರ್ತಿಸುಬ್ಬ ರಸ್ತೆ ನಾಮಫಲಕ ಅನಾವರಣ: ಪಟ್ಲ ಫೌಂಡೇಶನ್ ಮನವಿಗೆ ಪುರಸ್ಕಾರ

ಕುಂಬ್ಳೆ: ಯಕ್ಷಗಾನದ ಪಿತಾಮಹ, ಯಕ್ಷ ಕವಿ ಪಾರ್ತಿ ಸುಬ್ಬ ಇವರ ಹುಟ್ಟೂರಾದ ಕುಂಬ್ಳೆಯ ಪೋಲಿಸ್ ಸ್ಟೇಷನ್ ಬಳಿ ರೂ. 3.50 ಕೋಟಿ ವೆಚ್ಚದಲ್ಲಿ ಸುಮಾರು 2.5 ಕಿ.ಮೀ ಉದ್ದದ ಹೊಸದಾಗಿ ನಿರ್ಮಿಸಲಾದ ರಸ್ತೆಗೆ ಯಕ್ಷ ಕವಿ ಪಾರ್ತಿ ಸುಬ್ಬ ರಸ್ತೆ ಎಂಬುದಾಗಿ ಕೇರಳ ಸರಕಾರ, ಕುಂಬ್ಳೆ ಗ್ರಾಮ ಪಂಚಾಯತ್ ಮೂಲಕ ಅಧಿಕೃತ ಘೋಷಣೆ ಮಾಡಿತು.


ರಸ್ತೆ ನಾಮಫಲಕದ ಅನಾವರಣವನ್ನು ಕುಂಬ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಂಡರೀಕಾಕ್ಷ ನೆರವೇರಿಸಿದರು.
ಈ ಸಂದರ್ಭ‌ ಯಕ್ಷಧ್ರುವ ಪಟ್ಲ‌ ಫೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಪಾರ್ತಿ ಸುಬ್ಬ ಅವರು ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದು, ಅವರ ಹೆಸರು ಮುಂದಿನ ಜನಾಂಗಕ್ಕೆ ತಿಳಿದು ಯಕ್ಷಕಲಾ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಅಜರಾಮರಾಗಿ ಉಳಿಯುವಂತಾಗಬೇಕಿದೆ. ಈ ಉದ್ದೇಶದಿಂದ ಎಂಬ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕುಂಬ್ಳೆ ಘಟಕ, ಮೂರು ವರ್ಷಗಳಿಂದ ಹಲವು ಬಾರಿ ಕೇರಳ ಸರಕಾರಕ್ಕೆ ಕುಂಬ್ಳೆ ಗ್ರಾಮ ಪಂಚಾಯತ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ನಿರಂತರ ಪ್ರಯತ್ನದ ಫಲವಾಗಿ ನಾಮಫಲಕ ಅನಾವರಣಗೊಂಡಿದೆ‌. ರಸ್ತೆ ಅನಾವರಣಗೊಳಿಸಲು ಸಹಕರಿಸಿದ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಅಭಿನಂದನೆಗಳು ಎಂದರು‌.


ಫಲಕ ಅನಾವರಣ ಸಂದರ್ಭ ಪಂಚಾಯತ್ ಸದಸ್ಯರುಗಳು, ಯಕ್ಷಧ್ರುವ ಪಟ್ಲ ಫೌಂಡೇಶನ್ ಕುಂಬ್ಳೆ ಘಟಕದ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಫೌಂಡೇಶನ್ ನ ಹಿತೈಷಿ ರಾಘವೇಂದ್ರ ಬದಿಯಡ್ಕ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

error: Content is protected !!