ಜನರಿಗೆ ಮೋಸ ಮಾಡಿ ಕೊಳ್ಳೆ ಹೊಡೆಯುವುದು ಕಾಂಗ್ರೆಸ್ ಸಂಸ್ಕೃತಿ: ಹರಿಕೃಷ್ಣ ಬಂಟ್ವಾಳ್

ಬೆಳ್ತಂಗಡಿ: ತಾಲೂಕು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಜನರನ್ನು ಮೋಸ ಮಾಡಿ ಅವರ ದುಡ್ಡನ್ನು ಕೊಳ್ಳೆ  ಹೊಡೆಯುವುದು ಕಾಂಗ್ರೆಸ್ ಸಂಸ್ಕ್ರತಿ,  ಅವರಿಗೆ ಕೊಟ್ಟು ಗೊತ್ತಿಲ್ಲ. ತಾಲೂಕಿನಲ್ಲಿ ಕಳೆದ ವರ್ಷ ನೆರೆ ಸಂದರ್ಭ, ಶಾಸಕರು‌ ಜನರ ಹಿತರಕ್ಷಣೆಗಾಗಿ ಫ್ಲಡ್ ರಿಲೀಫ್ ಫಂಡ್ ಮಾಡಿದ್ದರು. ಆದರೆ ಇದನ್ನೇ ಬಂಡವಾಳವಾಗಿಸಿದ ತಾಲೂಕಿನ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್ ಸೂಚನೆ ಮೇರೆಗೆ ಚುನಾವಣೆ ಪ್ರಚಾರಕ್ಕಾಗಿ ಪ್ರತಿಭಟನೆ ನಡೆಸಿ, ಅಪಪ್ರಚಾರ ಮಾಡಿದರು. ಆದರೆ ಆ ಪ್ರತಿಭಟನೆ ವ್ಯರ್ಥವಾಯಿತು. ಹಣ ಪೋಲಾಗಿಲ್ಲ, ಬ್ಯಾಂಕ್‍ನಲ್ಲಿ ಸುಭದ್ರವಾಗಿದೆ ಎಂದು ತಿಳಿದು ಮುಖಕ್ಕೆ ಮಸಿ ಬಳಿಸಿಕೊಂಡಂತಾಗಿ ಮಾಜಿ ಶಾಸಕರು ಸುಮ್ಮನಾಗಿದ್ದಾರೆ. ದೆಹಲಿಯಿಂದ ಬೆಳ್ತಂಗಡಿವರೆಗೆ ಕಾಂಗ್ರೆಸ್ಸಿಗರು ಕಬಳಿಸಿದ್ದು ಮಾತ್ರ, ಸಮಾಜಕ್ಕೆ ಏನೂ ನೀಡಿಲ್ಲ ಎಂದು ಕಿಯೋನಿಕ್ಸ್ ಅಧ್ಯಕ್ಷ, ಬೆಳ್ತಂಗಡಿ ಬಿಜೆಪಿ ಮಂಡಲ ಪ್ರಭಾರಿ ಹರಿಕೃಷ್ಣ ಬಂಟ್ವಾಳ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಅವರು ಸಂತೆಕಟ್ಟೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದಿಂದಲೇ ಜಾತಿ ರಾಜಕೀಯ, ಮತೀಯ ರಾಜಕೀಯ, ಭ್ರಷ್ಟಾಚಾರ, ಕೋಮುವಾದ, 50 ವರ್ಷಗಳ ಸುದೀರ್ಘ ಕುಟುಂಬ ರಾಜಕೀಯ ನಡೆದು ದೇಶದ ಅಭಿವೃದ್ಧಿ ಅಧಃಪತನದತ್ತ ಸಾಗಿತ್ತು. ಇದೀಗ ಬದಲಾವಣೆಯ ಪರ್ವ ಆರಂಭವಾಗಿದ್ದು, ನವ ಭಾರತ ನಿರ್ಮಾಣಕ್ಕೆ ಪ್ರಧಾನಿ ಮೋದಿ ಆತ್ಮ ನಿರ್ಭರ ಭಾರತದ ಸಂಕಲ್ಪ ಮಾಡಿದ್ದಾರೆ. ಆದ್ದರಿಂದ ನವ ಬೆಳ್ತಂಗಡಿ ನಿರ್ಮಾಣ ಅಗತ್ಯ. ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಪಕ್ಷ ಬಲಪಡಿಸಲು ಶ್ರಮವಹಿಸಬೇಕು ಎಂದರು.
ರಾಮಾಯಣ, ಮಹಾಭಾರತದ ಉಲ್ಲೇಖ:
ದೇಶದಲ್ಲಿ ಬಿಜೆಪಿ ಎದ್ದು ನಿಲ್ಲಲು ಕಾಂಗ್ರೆಸ್ ಪಕ್ಷವೇ ನೇರ ಕಾರಣ. ರಾವಣನಿಂದಾಗಿ ರಾಮನ ಪರಿಚಯ ಜಗತ್ತಿಗೆ ತಿಳಿಯಿತು. ಕೃಷ್ಣನ ಬಗ್ಗೆ ತಿಳಿಯಲು ಕಂಸನಿಂದ ಸಾಧ್ಯವಾಯಿತು. ಕಾಂಗ್ರೆಸ್ ಪಕ್ಷದ ಜನವಿರೋಧಿ ಕಾರ್ಯಗಳಿಂದಾಗಿ ಪ್ರಧಾನಿ ಮೋದಿಯವರ ಕುರಿತು ಜನರಿಗೆ ತಿಳಿದು, ಮೋದಿ ಜನನಾಯಕರಾದರು. ಮೊದಲು ಚೀನಾ ಆಕ್ರಮಣ ಮಾಡುತ್ತಿದ್ದ ಸಂದರ್ಭ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದ ಪ್ರಧಾನಿಗಳು ರಷ್ಯಾ ಮೊದಲಾದ ದೇಶಗಳ ಪ್ರಧಾನಿಗಳನ್ನು ಭೇಟಿಯಾಗಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ಆದರೆ ಕಾಲ ಬದಲಾಗಿದೆ. ಪ್ರಧಾನಿ ಮೋದಿ ಚೀನಾದ ಆಕ್ರಮಣ ನಡೆಸುವ ವಿಚಾರ ತಿಳಿದು ಎದೆಗುಂದದೆ ಪ್ರತಿದಾಳಿಗೆ ಸಿದ್ಧ ಎಂಬ ಸಂದೇಶ ಸಾರಿದ್ದರಿಂದ ಚೀನವೂ ಸುಮ್ಮನಾಯಿತು ಎಂದರು.
ತಳಮಟ್ಟದಲ್ಲಿ ಶ್ರಮ ವಹಿಸುವ ಕಾರ್ಯಕರ್ತರಿಂದ ಮಾತ್ರ ಪಕ್ಷದ ಅಭಿವೃದ್ಧಿ ಸಾಧ್ಯ. ಚುನಾವಣೆಯಲ್ಲಿ ಗೆದ್ದಲ್ಲಿ ಪಕ್ಷದ ಕಾರ್ಯಕರ್ತರನ್ನು ಗೌರವಿಸುವ ಕಾರ್ಯವನ್ನು ಪಕ್ಷ ಮಾಡಲಿದೆ. ತಾಲೂಕನ್ನು ಅಭಿವೃದ್ಧಿಗೊಳಿಸಲು ಶಾಸಕರು ಬೆಂಗಳೂರಿಗೆ ತೆರಳಿ, ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ಕಷ್ಟಪಟ್ಟು ಅನುದಾನಗಳನ್ನು ಬಿಡುಗಡೆಗೊಳಿಸಿ ಅನುಷ್ಠಾನಗೊಳಿಸಿರುವುದು, ಸಾಮಾನ್ಯ ಜನರಿಗೂ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ. ಅದು ಅವರ ಶ್ರಮ ಸಂಸ್ಕತಿಯನ್ನು ಬಿಂಬಿಸುತ್ತದೆ ಎಂದು ಶಾಸಕರ ಕಾರ್ಯವೈಖರಿ ಹಾಗೂ ಕಾರ್ಯಕರ್ತರ ಕೆಲಸವನ್ನು ಶ್ಲಾಘಿಸಿದರು.
ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷ ಜಯಂತ್ ಕೊಟ್ಯಾನ್ ವಹಿಸಿದ್ದರು. ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಜಿಲ್ಲಾ ಪ್ರಭಾರಿ ಭರತೇಶ್, ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್, ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮೀ ಜನಾರ್ಧನ ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಚೆನ್ನಕೇಶವ ಉಪಸ್ಥಿತರಿದ್ದರು.
ಬೆಳ್ತಂಗಡಿ ಮಂಡಲದ ವಿವಿಧ ಮೋರ್ಚಾ ಪದಾಧಿಕಾರಿಗಳು ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದರು.
ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಗೌಡ ಕೆ. ಆರ್. ಸ್ವಾಗತಿಸಿ, ಶ್ರೀನಿವಾಸ ರಾವ್ ನಿರೂಪಿಸಿ, ವಂದಿಸಿದರು.

error: Content is protected !!