ಧರ್ಮಸ್ಥಳ: ಕೊರೋನಾ ಕಾರಣದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಧಾರ್ಮಿಕ ವಿಧಿ ವಿಧಾನಗಳಲ್ಲಿ ಕ್ಷೇತ್ರದ ಪರಂಪರೆ ಹಾಗೂ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಹಲವು ಬದಲಾವಣೆಗಳನ್ನು ಮಾಡಲಾಗಿತ್ತು. ದೇವರ ಉತ್ಸವ, ಅಣ್ಣಪ್ಪ ಬೆಟ್ಟದಲ್ಲಿ ನಡೆಯುವ ನೇಮ, ನಡಾವಳಿ ಹಾಗೂ ಸೇವಾ ಕಾರ್ಯಗಳಿಗೆ ಜೋತಿಷ್ಯದ ಪ್ರಕಾರ ದೈವ, ದೇವರುಗಳ ಅನುಮತಿ ಪಡೆದು ತಾತ್ಕಾಲಿಕ ವಿರಾಮ ನೀಡಲಾಗಿತ್ತು. ದೈನಂದಿನ ಸೇವೆಗಳನ್ನೂ ನಿಯಮಿತವಾಗಿ ನಡೆಸಲಾಗುತ್ತಿತ್ತು. ಒಟ್ಟಿನಲ್ಲಿ ಕೊರೋನಾದಿಂದಾಗಿ ಜನ ಜೀವನದ ಜೊತೆಗೆ ದೇವರೂ ಸ್ವಯಂ ಶಿಸ್ತಿಗೆ ಒಳಗಾದಂತೆ ಕಂಡುಬಂತು ಎಂದು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 53ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಂದರ್ಭ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಮಾತನಾಡಿದರು.
ಉತ್ಸವ ಸಂದರ್ಭದಲ್ಲಿ ಕಲ್ಯಾಣಿಯಲ್ಲಿ ಮತ್ಸ್ಯಗಳು ಸತ್ತು ನೀರು ಕಲುಷಿತಗೊಂಡಿತ್ತು. ಬಳಿಕ ದೇಗುಲ ಬಳಿಯ ಕಲ್ಯಾಣಿಯ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿದೆವು. ದೇವರ ಉತ್ಸವದ ಸಂದರ್ಭ ದೇವರ ಅವಭೃತಕ್ಕಾಗಿ ಕಲ್ಯಾಣಿ ಪರಿಶುದ್ಧ ನೀರಿನಿಂದ ತುಂಬಿಕೊಂಡದ್ದು ಅಚ್ಚರಿ ಅಥವಾ ಪವಾಡದಂತೆ ಕಂಡುಬಂತು. ಸಾಮಾನ್ಯವಾಗಿ ಅವಭೃತಕ್ಕೆ ನೇತ್ರಾವತಿ ನದಿ ಬಳಿ ತೆರಳುತ್ತಿದ್ದುದು ವಾಡಿಕೆ ಎಂದರು.
ಹೇಮಾವತಿ ವೀ. ಹೆಗ್ಗಡೆ ಶ್ರೀ ಧಾಮ ಮಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಹಾವೇರಿ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ.ಕೆ. ಚಿನ್ನಪ್ಪಗೌಡ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೋನಿಯಾ ವರ್ಮ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.