ಶ್ರೀರಾಮ ಜನ್ಮಭೂಮಿ ಕುರಿತು ದೆಹಲಿಯಲ್ಲಿ ನ. 10, 11ರಂದು ಸಮಾವೇಶ: ಪೇಜಾವರ ಶ್ರೀ

ಧರ್ಮಸ್ಥಳ: ನವೆಂಬರ್ 10 ಮತ್ತು 11ರಂದು ಶ್ರೀ ರಾಮ ಜನ್ಮ ಭೂಮಿ ಕುರಿತು ಉತ್ತರ ಭಾರತದ ದೆಹಲಿಯಲ್ಲಿ ಎರಡು ದಿನಗಳ ಸಮಾವೇಶ ನಡೆಯಲಿದ್ದು, ಮಂದಿರದ ಪ್ರಯುಕ್ತವಾಗಿ ಮುಂದಿನ ಅಭಿಯಾನ ಹೇಗೆ ನಡೆಯಬೇಕು ಅನ್ನುದರ ಕುರಿತಾಗಿ ಚರ್ಚೆ ನಡೆಯಲಿದೆ ಎಂದು ಅಯೋಧ್ಯೆ ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಟ್ರಸ್ಟಿ ಹಾಗೂ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜೊತೆ ಚರ್ಚೆ ನಡೆಸಿ, ಪ್ರಜಾಪ್ರಕಾಶ ಜೊತೆ ಮಾತನಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ೫೩ನೇ ಪಟ್ಟಾಭಿಷೇಕ ದಿನದ ಅವರಿಗೆ ಅಭಿನಂದನೆ ಸಲ್ಲಿಸಲು ಹಾಗೂ ಕೃಷ್ಣಾನುಗ್ರಹ ಪ್ರಾರ್ಥನೆ ಮಾಡುವುದಗೋಸ್ಕರ ನಾವು ಇಂದು ಬೆಂಗಳೂರಿನಿಂದ ಉಡುಪಿಗೆ ಹೋಗುವ ದಾರಿ ಮಧ್ಯೆ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆದುಕೊಂಡು ಅವರಿಗೆ ಕೃಷ್ಣಾನುಗ್ರಹವನ್ನು ಪ್ರಾರ್ಥಿಸಿ ಹೊರಡುತ್ತಿದ್ದೇವೆ.
ವಿಜಯ ದಶಮಿ ದಿನ ಪೂಜೆ‌ ಮುಗಿಸಿ, ಸಮಾವೇಶದಲ್ಲಿ ಭಾಗವಹಿಸಲು ದೆಹಲಿಗೆ ಹೊರಡಲಿದ್ದೇವೆ ಎಂದರು.
ಉತ್ತರ ಭಾರತಕ್ಕೆ ತೆರಳುವ ಭಕ್ತರಿಗೆ ಸಹಾಯವಾಗಲು, ತೀರ್ಥ ಕ್ಷೇತ್ರ ಸಂದರ್ಶಿಸುವ ಸಂದರ್ಭ ಕರ್ನಾಟಕದಿಂದ ಬರುವ ಭಕ್ತರಿಗೆ ಉಳಿದುಕೊಳ್ಳಲು ಅನುಕೂಲವಾಗಬೇಕು ಎಂದು ಗುರುಗಳಾದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ಅಲ್ಲಲ್ಲಿ ಛತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಗುರುಗಳ ಕಾಲಾ ನಂತರ ಅಲ್ಲಿ ಹೋಗಿ ವ್ಯವಸ್ಥೆ ಕುರಿತಾಗಿ ನೋಡುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಬಾರಿ ಕೂಡಾ ಕಾಶಿ, ಅಯೋಧ್ಯೆ, ಹರಿದ್ವಾರ, ಬದರಿ ಮೊದಲಾದ ತೀರ್ಥ ಕ್ಷೇತ್ರಗಳಲ್ಲಿ ಸಂಚಾರ ಮಾಡಿಕೊಂಡು ಬರಲಿದ್ದೇವೆ ಎಂದು ತಿಳಿಸಿದರು.
ಭೇಟಿ ಸಂದರ್ಭ ಶ್ರೀ ಧಾಮ ಮಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಎಸ್.ಡಿ.ಎಂ‌. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.‌ ಸುರೇಂದ್ರ ಕುಮಾರ್, ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!