
ಬೆಳ್ತಂಗಡಿ : ಅಕ್ರಮವಾಗಿ ಮಾರಾಟ ಮಾಡಲು ಕಾರಿನಲ್ಲಿ ಮಾದಕವಸ್ತು ಎಮ್.ಡಿ.ಎಮ್.ಎ ಸಂಗ್ರಹಿಸಿಟ್ಟದ್ದನ್ನು ಬೆಳ್ತಂಗಡಿ ಪೊಲೀಸರು ಪತ್ತೆಹಚ್ಚಿ ಓರ್ವ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳ್ತಂಗಡಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದಡ್ಕ ರಸ್ತೆಯಲ್ಲಿ ಜ.3 ರಂದು ಸಂಜೆ 5:45 ಕ್ಕೆ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಆನಂದ್.ಎಮ್ ನೇತೃತ್ವದ ತಂಡ ಗಸ್ತು ವೇಳೆ ಅನುಮಾನಸ್ಪದವಾಗಿ ರಸ್ತೆ ಪಕ್ಕದಲ್ಲಿ ನಿಂತಿದ್ದ KA-19-MG-4669 ನಂಬರಿನ ಐ20 ಕಾರನ್ನು ಪರಿಶೀಲನೆ ಮಾಡಿದಾಗ ಸದ್ರಿ ಕಾರಿನ ಒಳಗಡೆ ಮಾದಕ ವಸ್ತು ಎಮ್.ಡಿ.ಎಮ್.ಎ ಪತ್ತೆಯಾಗಿದೆ.
ಕಾರಿನೊಳಗಡೆ ಖಾಲಿ ಸಿಗರೇಟ್ ಪ್ಯಾಕ್ ಒಳಗಡೆ ಎಮ್.ಡಿ.ಎಮ್.ಎ ಮಾದಕವಸ್ತುವನ್ನು ಸಣ್ಣ ಸಣ್ಣ ಪ್ಯಾಕ್ ಗಳನ್ನು ಮಾಡಿ ತುಂಬಿಸಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ 5,54,800 ರೂಪಾಯಿಯ 55.48 ಗ್ರಾಂ ಎಮ್.ಡಿ.ಎಮ್.ಎ ಮಾದಕವಸ್ತು ಪತ್ತೆಯಾಗಿದೆ. 6 ಲಕ್ಷ ರೂಪಾಯಿ ಮೌಲ್ಯದ ಐ20 ಕಾರನ್ನು ವಶಪಡಿಸಿಕೊಂಡಿದ್ದು. ಕಾರು ಮತ್ತು ಮಾದಕವಸ್ತುವಿನ ಮೌಲ್ಯ 11,54,800 ರೂಪಾಯಿ ಅಗಿದೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದಕವಸ್ತು ಮಾರಾಟ ಮಾಡಲು ಕಾರಿನಲ್ಲಿ ಸಂಗ್ರಹಿಸಿಟ್ಟಿದ್ದ ಮಂಗಳೂರು ನಗರದ ದೇರಳಕಟ್ಟೆಯ ಕೋಟೆಕಾರು ನಿವಾಸಿ ಅಬುಬಕ್ಕರ್ ಮಗ ಉಮರ್ ಶರೀಫ್(42) ಬಂಧಿತ ಆರೋಪಿಯಾಗಿದ್ದು. ಇವನು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದಡ್ಕದಲ್ಲಿ ಜ್ಯೂಸ್ ಸೆಂಟರ್ ಹೊಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.