
ಬೆಳ್ತಂಗಡಿ: ನಾವೂರು ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಡಿ.26 ರಂದು ನಾವೂರು ಸ.ಹಿ.ಪ್ರಾ.ಶಾಲಾ ವಠಾರದಲ್ಲಿ ನಡೆಯಿತು.
ಕುಡಿಯುವ ನೀರಿನ ದರ ಹೆಚ್ಚಳ ಮಾಡಲಾಗಿದೆ ಇದರಿಂದ ಜನಸಾಮಾನ್ಯರಿಗೆ ಆರ್ಥಿಕವಾಗಿ ಸಮಸ್ಯೆಯಾಗುತ್ತದೆ ಎಂದು ಗ್ರಾಮಸ್ಥರು ಹೇಳಿದಾಗ ಇಲಾಖೆಯ ನಿರ್ದೇಶನದಂತೆ ಕ್ರಮ ವಹಿಸಲಾಗಿದೆ ಎಂದು ಪಿಡಿಒ ತಿಳಿಸಿದರು. ನೀರು ಸರಬರಾಜು ನಿರ್ವಹಣೆಗೆ ಮುಂದೆ ಸರ್ಕಾರದಿಂದ ಹಣ ಬರುತ್ತದೆ. ಮಿತಿಯಿಂದ ಹೆಚ್ಚು ನೀರು ಬಳಸಿದರೆ ಶುಲ್ಕ ನಿಗದಿ ಪಡಿಸಿ, ಬೇರೆ ಬೇರೆ ಚಟುವಟಿಕೆಗಳಿಗೆ ಬಳಸುವವರಿಗೆ ಕಡಿವಾಣ ಹಾಕಲು ಕ್ರಮ ವಹಿಸಲು ನಿರ್ದೇಶನ ನೀಡಲಾಗಿದೆ ಎಂದು ಇಓ ಹೇಳಿದರು.
ಜೆಜೆಎಂ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ, ಕುಡಿಯುವ ನೀರಿನ ಪಂಪ್ ಹೌಸ್‌ಗೆ ಸರಬರಾಜು ಆಗುತ್ತಿರುವ ವಿದ್ಯುತ್ ಮೌಲ್ಯವನ್ನು ಕಡಿಮೆಗೊಳಿಸಬೇಕು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅರಣ್ಯವಾಸಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದಾಗ ವನ್ಯಜೀವಿ ಅರಣ್ಯ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು. ನಾಲ್ಕು ಸಬ್ ಸ್ಟೇಷನ್ ನಿರ್ಮಾಣದ ತಾಲೂಕಿನಲ್ಲಿ ನಡೆಯಲಿದೆ ಎಂದು ಶಾಸಕರು ತಿಳಿಸಿದರು.
ಬೆಳೆ ವಿಮೆ ಸಮರ್ಪಕವಾಗಿ ಫಲಾನುಭವಿಗಳಿಗೆ ಜಮೆಯಾಗಿಲ್ಲ. ಮಳೆ ಮಾಪನ ನಿರ್ವಹಣೆಯ ಹೊಣೆ ಯಾರದ್ದು ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದರು. ಬೆಳೆ ವಿಮೆ ಈಗಾಗಲೇ 70 ಕೋಟಿ ರೂಪಾಯಿ ತಾಲೂಕಿನ ಕೃಷಿಕರಿಗೆ ಜಮೆಯಾಗಿದೆ. ತಾಲೂಕಿನಲ್ಲಿ ಯಾವುದೇ ಮಳೆಮಾಪನದ ಸಮಸ್ಯೆ ಇಲ್ಲ, ಕಳೆದ ಬಾರಿ ಸರಿಯಾಗಿ ಮಳೆ ಮಾಪನ ನಮ್ಮಲ್ಲಿ ಆಗಿದ್ದು ರೈತರಿಗೆ ವಿಮೆ ಮೊತ್ತ ಜಮೆಯಾಗಿದೆ ವಿಮಾ ಕಂಪೆನಿಗೆ ಸೂಕ್ತ ಕ್ರಮ ವಹಿಸಲು ನಿರ್ದೇಶನ ನೀಡಲಾಗುವುದು ಎಂದು ಶಾಸಕರು ತಿಳಿಸಿದರು.
ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಎರ್ಮಾಳ ಎಂಬಲ್ಲಿ ಅರಣ್ಯವಾಸಿಗಳಿಗೆ ಯಾವುದೇ ಭೂ ದಾಖಲೆಗಳು ಆಗುತ್ತಿಲ್ಲ , ಎರಡು ಗ್ರಾಮದ ಗಡಿಯ ಮಧ್ಯೆಯಲ್ಲಿ ಅವರು ವಾಸಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಶಾಸಕರು ತಹಶೀಲ್ದಾರ್ ಗೆ ಸೂಚನೆ ನೀಡಿದರು.
ಕೃಷಿ ಭೂಮಿಗೆ ಪ್ರಾಣಿಗಳ ಉಪಟಳವಿದೆ. ಕೊವಿ ಪರವಾನಿಗೆ ನೀಡಲು ಅನುಮತಿ ನೀಡುವಂತೆ ಸಾರ್ವಜನಿಕರು ಹೇಳಿದಾಗ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ 10 ಕಿಮೀ ದೂರದಲ್ಲಿ ಪರವಾನಿಗೆ ನೀಡಲು ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಬೇಕು ಎಂದು ಅರಣ್ಯಾಧಿಕಾರಿಗಳು ತಿಳಿಸಿದರು. ಸಾರ್ವಜನಿಕ ಆಟ ಮೈದಾನ ಜಾಗ ಕಾಯ್ದಿರಿಸುವ ಬೇಕು ಎಂದು ನಾಗರೀಕರು ಹೇಳಿದರು.
ಶಾಲೆಯ ಯಾವುದೇ ಕೊಠಡಿ ನಿರ್ಮಾಣಕ್ಕೆ ಕಳೆದ ಎರಡು ವರ್ಷದಲ್ಲಿ ಅನುದಾನ ಬಂದಿಲ್ಲ. ಹಿಂದಿನ ಸರ್ಕಾರ ವಿವೇಕ ಶಾಲಾ ಕೊಠಡಿ ಯೋಜನೆಯ ಮೂಲಕ ತಾಲೂಕಿನಲ್ಲಿ ನಾನಾ ಶಾಲೆಗಳಲ್ಲಿ ಕೊಠಡಿ ನಿರ್ಮಾಣವಾಗಿದೆ ಆದರೆ ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆ ಯೋಜನೆಯನ್ನು ಕೈ ಬಿಟ್ಟಿದೆ, ಈಗಾಗಲೇ 6 ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ, ಕೆಪಿಎಸ್ ಶಾಲೆ ನಿರ್ಮಾಣದ
ಕುರಿತು ಕ್ರಮ ವಹಿಸುವುದಾಗಿ ಶಾಸಕರು ತಿಳಿಸಿದರು.
ರೈತರಿಗೆ ವಿನಾಯಿತಿ ಬಡ್ಡಿ ದರದ ಸಾಲದ ಮೊತ್ತವನ್ನು ಹೆಚ್ಚಿಸಬೇಕು. ಶಾಲಾ ಆವರಣದ ಬಳಿ ಸೋಲಾರ್ ಬೇಲಿ ಅಳವಡಿಸಿದ್ದರಿಂದ ಅನಾಹುತ ಸಂಭವಿಸಬಹುದು ಅದನ್ನು ತೆರವುಗೊಳಿಸುವ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಹಲವು ಬಾರಿ ಸೂಚಿಸಿದರು ಅವರು ಸ್ಪಂದಿಸುತ್ತಿಲ್ಲ. ಏನಾದರೂ ಅನಾಹುತ ಸಂಭವಿಸಿ ಮಾಧ್ಯಮದಲ್ಲಿ ವರದಿ ಬಂದ್ರೆ ಮಾತ್ರ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದೇ ಎಂದು ಸಾರ್ವಜನಿಕರು ಪ್ರಶ್ನಿಸಿದರು. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಚಿವರಿಗೆ ಮನವಿ ಸಲ್ಲಿಸುವುದಾಗಿ ಶಾಸಕರು ತಿಳಿಸಿದರು.
ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ 157, 162 ಸರ್ವೇ ನಂಬರ್ ನಲ್ಲಿ ಪ್ಲಾಟಿಂಗ್ ನಡೆಸಬೇಕು ಎಂದು ಗ್ರಾಮಸ್ಥರು ಹೇಳಿದರು.
ಅಧ್ಯಕ್ಷೆ ಸುನಂದ, ಉಪಾಧ್ಯಕ್ಷೆ ಮಮತಾ, ಬಂಗಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲಿಯಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಜೆ. , ಸದಸ್ಯರು, ಇಲಾಖಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.