
ಬೆಳ್ತಂಗಡಿ: ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ, ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಹಾಗೂ ರಾಜ್ಯದ ರಬ್ಬರ್ ವ್ಯವಹಾರ ಮಾಡುವ ಸಹಕಾರ ಸಂಘಗಳ ಆಶ್ರಯದಲ್ಲಿ ರಬ್ಬರ್ ಬೆಳೆಗಾರರ ರಾಜ್ಯ ಸಮ್ಮೇಳನ-2025 ನ.29ರಂದು ಬೆಳಗ್ಗೆ 10 ರಿಂದ ಉಜಿರೆಯ ಶ್ರೀಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸಮಿತಿ ಅಧ್ಯಕ್ಷ ಶ್ರೀಧರ ಜಿ. ಭಿಡೆ ಹೇಳಿದರು. ಸೋಮವಾರ ಉಜಿರೆ ರಬ್ಬರ್ ಸೊಸೈಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ
ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವರದಿ ಬಿಡುಗಡೆಗೊಳಿಸುವರು. ಡಾ.ವಿಘ್ನೇಶ್ವರ ವರ್ಮುಡಿ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಕೊಟ್ಟಾಯಂ ರಬ್ಬರ್ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಎಂ.ವಸಂತಗೇಸನ್ ‘ಭಾರತದಲ್ಲಿ ರಬ್ಬರ್ ಕೃಷಿಯ ಭವಿಷ್ಯ’ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶಾಸಕರಾದ ಹರೀಶ್ ಪೂಂಜ, ಅಶೋಕ್ ಕುಮಾರ್ ರೈ, ಭಾಗೀರಥಿ ಮುರುಳ್ಯ ಹಾಗೂ ರಾಜೇಶ್ ನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್ ಹಾಗೂ ಮಂಜುನಾಥ ಭಂಡಾರಿ, ರಬ್ಬರ್ ಮಂಡಳಿ ಸದಸ್ಯ ಮುಳಿಯ ಕೇಶವ ಭಟ್ ಗುತ್ತಿಗಾರು, ಕರ್ನಾಟಕ ರಾಜ್ಯ ರಬ್ಬರು ವ್ಯಾಪಾರಿಗಳ ಸಂಘದ ಅಧ್ಯಕ್ಷ ಶಾಜಿ ಯು.ವಿ., ಎಸ್‌ಕೆಡಿಆರ್‌ಡಿಸಿ ಬಿ.ಸಿ.ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಮತ್ತಿತರರು ಉಪಸ್ಥಿತರಿರುವರು.

ಸಮ್ಮೇಳನಕ್ಕೆ 7ಕ್ಕೂ ಹೆಚ್ಚು ಸಂಸ್ಥೆಗಳು ಸಹಕರಿಸುತ್ತಿವೆ. ನಾನಾ ಕ್ರಮ ಹಾಗೂ ಬೇಡಿಕೆಗಳು ಹಾಗೂ ಅಂಶಗಳನ್ನು ಬೆಳೆಗಾರರ ಪರವಾಗಿ ಸರಕಾರಗಳ ಮುಂದಿಟ್ಟು ಪರಿಹಾರಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ಸಮ್ಮೇಳನ ನಡೆಯಲಿದೆ. ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಕೋರಿಕೆ ಮೇರೆಗೆ ಅರ್ಥಶಾಸ್ತ್ರಜ್ಞ ಡಾ. ವಿಶ್ವೇಶ್ವರ ವರ್ಮುಡಿ ತಯಾರಿಸಿದ ‘ನ್ಯಾಚುರಲ್ ರಬ್ಬರ್ ಎಕಾನಮಿ ಇನ್ ಕರ್ನಾಟಕ. ಎಟ್ ಕ್ರಾಸ್ ರೋಡ್’ ಕುರಿತು ವರದಿ ಮಂಡನೆಯಾಗಲಿದೆ ಎಂದರು. ರಬ್ಬರ್ ಸೊಸೈಟಿ ಉಪಾಧ್ಯಕ್ಷ, ಸಮ್ಮೇಳನ ಸಂಯೋಜಕ ಅನಂತ ಭಟ್ ಮಚ್ಚಿಮಲೆ, ಹಿರಿಯ ಅರ್ಥಶಾಸ್ತ್ರಜ್ಞ ಡಾ.ವಿಘ್ನೇಶ್ವರ ವರ್ಮುಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ, ನಿರ್ದೇಶಕರಾದ ಜಯಶ್ರೀ ಡಿ.ಎಂ. ಗೌಡ, ತಿಮ್ಮಪ್ಪ ಗೌಡ ಬೆಳಾಲು, ಬಾಲಕೃಷ್ಣ ಗೌಡ ಕೇರಿಮಾರ್, ಹೆಚ್ ಪದ್ಮ ಗೌಡ ಬೆಳ್ತಂಗಡಿ, ಅಬ್ರಾಹಂ ವಿ.ಎಸ್. ಕಳೆಂಜ, ಭರತ್ ಕುಮಾರ್ ಬಂಗಾಡಿ,
ಕೆ.ಜೆ. ಆಗಸ್ಟೀನ್, ಶಾಜಿ, ಹರೀಶ್ ರಾವ್ ಕಳೆಂಜ ಉಪಸ್ಥಿತರಿದ್ದರು.