ಬೆಂಗಳೂರು:ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಟಿ. ಜಯಂತ್ ಹಾಗೂ ಎಂ.ಡಿ ಸಮೀರ್ ಮತ್ತಿತರರ ಚಲನವಲನ, ಚಟುವಟಿಕೆಗಳು, ಹಣಕಾಸಿನ ಮೂಲ ಮತ್ತು ಅವರ ಸಂಪರ್ಕ ಜಾಲಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ.
ಈ ಕುರಿತಂತೆ ವಿಶೇಷ ತನಿಖಾ ತಂಡ (ಎಸ್.ಐ.ಟಿ) ಹಾಗೂ ಇತರರಿಗೆ ತಾವು 2025ರ ಆಗಸ್ಟ್ 20, ಸೆಪ್ಟೆಂಬರ್ 5,8 ಮತ್ತು 9ರಂದು ಸಲ್ಲಿಸಿರುವ ಮನವಿ ಮತ್ತು ದೂರುಗಳನ್ನು ಪರಿಗಣಿಸಲು ನಿರ್ದೇಶನ ನೀಡುವಂತೆ ಕೋರಿ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರಾದ ಬೆಂಗಳೂರು ನಿವಾಸಿ ತೇಜಸ್ ಎ. ಗೌಡ, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಉಜಿರೆ ನಿವಾಸಿ ಭಾಸ್ಕರ್ ಬಡೆಕೊಟ್ಟು, ಧರ್ಮಸ್ಥಳ ನಿವಾಸಿಗಳಾದ ಸುರೇಂದ್ರ ಪ್ರಭು ಹಾಗೂ ಧನಕೀರ್ತಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
ಅಲ್ಲದೇ, ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಎಸ್.ಐ.ಟಿ, ಆದಾಯ ತೆರಿಗೆ ಮಂಗಳೂರು ಕೇಂದ್ರ ವಲಯ ಅಧಿಕಾರಿ, ಜಾರಿ ನಿರ್ದೇಶನಾಲಯದ ಮಂಗಳೂರು ಉಪ ವಲಯ ಕಚೇರಿಯ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಅಕ್ಟೋಬರ್ 16ಕ್ಕೆ ಮುಂದೂಡಿತು.
ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯ ಹೆಸರಲ್ಲಿ ಹೋರಾಟ ಮಾಡುತ್ತಿದ್ದು, ಆ ಹೋರಾಟಕ್ಕೆ ವಕೀಲರಿಗೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ ಎಂದು ಹೇಳುತ್ತಾರೆ. ಜೊತೆಗೆ ಈ ಹೋರಾಟದಲ್ಲಿ ತೊಡಗಿಸಿಕೊಂಡ ಸೌಜನ್ಯ ತಾಯಿಯು ಸೇರಿದಂತೆ ಪ್ರತಿಯೊಬ್ಬರು ಹೋರಾಟದ ಸಮಯದಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ಆಸ್ತಿ ಖರೀದಿಸಿರುತ್ತಾರೆ. ಅಲ್ಲದೇ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವರದಿ ಮಾಡಲು ಹಣವನ್ನು ಪಡೆದಿದ್ದಾರೆ. ಇದಕ್ಕೆಲ್ಲ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ತೇಜಸ್ ಗೌಡ ಎಸ್.ಐ.ಟಿಗೆ ಮನವಿ ಸಲ್ಲಿಸಿದ್ದರು.
ಇನ್ನೊಬ್ಬ ಅರ್ಜಿದಾರರಾದ ಧನಕೀರ್ತಿಯವರು ತಮ್ಮ ದೂರಿನಲ್ಲಿ ಯೂಟ್ಯೂಬರ್ ಕುಡ್ಲ ರಾಮ್ ಪೇಜ್ ಎನ್ನುವವರು ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿರಂತರವಾಗಿ ಷಡ್ಯಂತ್ರ ಪೂರಿತ ವರದಿಗಳನ್ನು ಪ್ರಸಾರ ಮಾಡುತ್ತಿದ್ದು ಅದಕ್ಕೆ ಯಾವುದು ಮೂಲ ಎಂದು ತನಿಖೆ ಮಾಡಬೇಕು ಹಾಗೂ ಎಸ್ಐಟಿ ತನಿಖೆ ಸಮಯದಲ್ಲಿ ದಿನನಿತ್ಯ ತನ್ನದೇ ತನಿಖಾ ವರದಿಯನ್ನು ಎಸ್ಐಟಿಯ ತನಿಖಾ ವರದಿ ಎಂಬ ರೀತಿಯಲ್ಲಿ ಬಿಂಬಿಸಿ ಪ್ರಸಾರ ಮಾಡುತ್ತಿದ್ದರು. ಈ ರೀತಿ ಪ್ರಸಾರ ಮಾಡಲು ಅವರಿಗೆ ವರದಿಯ ಮೂಲ ಯಾವುದು? ಅವರು ಎಸ್ಐಟಿಯಿಂದ ಮತ್ತು ಎಸ್ಐಟಿಯ ಯಾವ ಮೂಲದಿಂದ ಈ ಮಾಹಿತಿಗಳನ್ನು ಪಡೆಯಲು ಸಾಧ್ಯವಾಯಿತು ಎಂದು ಎಸ್ಐಟಿ ತಿಳಿಸುವಂತೆ ಕೋರಿದ್ದರು.
ವಿಠಲಗೌಡ ಎನ್ನುವವರು ಹಿಂದೆ ಹೋಟೆಲ್ ನಡೆಸುತ್ತಿರುವಾಗ ಜೊತೆಯಲ್ಲಿ ಕೆಲಸ ಮಾಡುವ ಕಾರ್ಮಿಕ ನನ್ನು ದಾರುಣವಾಗಿ ಕೊಲೆ ಮಾಡಿದ್ದು ಆ ಕೇಸ್ ಅನ್ನು ಮುಚ್ಚಿ ಹಾಕಲಾಗಿದೆ ಅದಕ್ಕೆ ಸಂಬಂಧಿಸಿದ ಕೆಲ ದಾಖಲಾತಿಗಳನ್ನು ಎಸ್ಐಟಿಗೆ ಸಲ್ಲಿಸಿರುತ್ತಾರೆ. ಇದರ ಬಗ್ಗೆ ಎಸ್ಐಟಿಯು ಕೂಲಂಕುಶವಾಗಿ ತನಿಖೆ ಮಾಡಬೇಕೆಂದು ಕೋರಿದ್ದಾರೆ.