ಬೆಳ್ತಂಗಡಿ: ಹಲವಾರು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳನ್ನೊಳಗೊಂಡ ಪ್ರಕೃತಿರಮಣೀಯ ಚಾರ್ಮಾಡಿ , ಪಶ್ಚಿಮ ಘಟ್ಟಗಳ ಮಡಿಲಲ್ಲಿ ಇರುವ ರಾಜ್ಯದ ದೊಡ್ಡ ತಾಲೂಕುಗಳೊಂದಾದ ಬೆಳ್ತಂಗಡಿ ತಾಲೂಕಿಗೆ ವಿವಿಧ ಕಡೆಗಳಿಂದ ಹಾಗೂ ಗ್ರಾಮೀಣ ಭಾಗಗಳಿಂದ ದಿನಂಪ್ರತಿ ಸಾವಿರಾರು ಮಂದಿ ಭೇಟಿ ನೀಡುತ್ತಾರೆ.ಅದರೆ ಸರಿಯಾದ ಬಸ್ ನಿಲ್ದಾಣದ ಕೊರತೆಯನ್ನು ಎದುರಿಸುತಿದ್ದ ಬೆಳ್ತಂಗಡಿಗೆ ಶಾಸಕ ಹರೀಶ್ ಪೂಂಜ ಅವರ ಬೇಡಿಕೆಯಂತೆ ನೂತನ ಕೆಎಸ್ ಆರ್ ಟಿ.ಸಿ ಬಸ್ ನಿಲ್ದಾಣ ಮಂಜೂರುಗೊಂಡು .ಕಳೆದ ಎರಡು ವರ್ಷಗಳ ಹಿಂದೆ ಕಾಮಗಾರಿಯ ಶಿಲಾನ್ಯಾಸ ನೆರವೇರಿ ಕೆಲಸ ತರಾತುರಿಯಲ್ಲಿ ಪ್ರಾರಂಭವಾಯಿತು.
ಇದಕ್ಕಾಗಿ ಬಸ್ ನಿಲ್ದಾಣದ ಬಳಿಯಿದ್ದ ಪಟ್ಟಣ ಪಂಚಾಯತ್ ನ ಪ್ರಯಾಣಿಕರ ತಂಗುದಾಣ ಸೇರಿದಂತೆ ಸುತ್ತಮುತ್ತಲಿನ ಅಂಗಡಿ ಕೋಣೆಗಳನ್ನು ತೆರವುಗೊಳಿಸಿ ಜಾಗವನ್ನು ಕೆಎಸ್ ಆರ್ ಟಿಸಿ ಗೆ ಹಸ್ತಾಂತರಗೊಳಿಸಲಾಗಿತ್ತು. ಪ್ರಯಾಣಿಕರು ಬಸ್ ಕಾಯುವಿಕೆಗಾಗಿ ಒಂದು ಚಿಕ್ಕ ಕೋಣೆಯಲ್ಲಿ ಚಯರ್ ಹಾಕಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದರೆ ಈ ಚಯರ್ ಹಾಗೂ ಕೋಣೆಯ ಸ್ಥಿತಿಯಂತೂ ಶೋಚಾನೀಯವಾಗಿದೆ. ತುಕ್ಕು ಹಿಡಿದ ಚಯರ್ ಗಳು ಮಳೆ ನೀರು, ಕಸದ ರಾಶಿ ,ಪಾಚಿಗಟ್ಟಿದ ಗೋಡೆ, ಸುತ್ತಮುತ್ತ ಗಬ್ಬು ನಾತ, ಈ ಎಲ್ಲ ಅವ್ಯವಸ್ಥೆಯ ನಡುವೆ ದಿನಂಪ್ರತಿ ನೂರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಬಸ್ ಗಾಗಿ ಕಾಯುವ ದಯನೀಯ ಸ್ಥಿತಿ ಇದೆ.
ಅದಲ್ಲದೇ ನೂತನ ಬಸ್ ನಿಲ್ದಾಣದ ಕಾಮಗಾರಿಗಾಗಿ ಅಗೆದಿರುವ ಹೊಂಡಗಳಲ್ಲಿ ನೀರು ನಿಂತು ರೋಗ ಹರಡುವ ಭೀತಿ ನಿರ್ಮಾಣವಾಗಿದೆ.
ದಿನಂಪ್ರತಿ ವಿವಿಧ ಭಾಗಗಳಿಗೆ ತೆರಳುವ ನೂರಾರು ಬಸ್ ಗಳು ಬೆಳ್ತಂಗಡಿ ಆಗಮಿಸುತಿದ್ದು, ಪ್ರಯಾಣಿಕರಿಗೆ ತಾತ್ಕಾಲಿಕವಾಗಿ ನಿರ್ಮಿಸಿದ ತಂಗುದಾಣದ ಸ್ಥಿತಿ ನರಕವಾಗಿದೆ.
ಈಗಾಗಲೇ ಎರಡು ವರ್ಷಗಳಿಂದ ಇದೇ ನರಕದಲ್ಲಿ ನಾವೆಲ್ಲರೂ ನಿಲ್ಲುವಂತಾಗಿದೆ. ನೂತನ ಬಸ್ ನಿಲ್ದಾಣದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದನ್ನು ನೋಡಿದರೆ ಪೂರ್ಣಗೊಳ್ಳಲು ಇನ್ನೆಷ್ಟು ವರ್ಷ ಬೇಕಾದೀತೊ ಗೊತ್ತಿಲ್ಲ, ಅದರೆ ನಿತ್ಯ ಪ್ರಯಾಣಿಕರಾದ ನಮ್ಮ ಸ್ಥಿತಿಯಂತೂ ಯಾರಿಗೂ ಬೇಡ, ತುಕ್ಕು ಹಿಡಿದು ತುಂಡಾಗಿರುವ ಕಬ್ಬಿಣದ ಕುರ್ಚಿಯಲ್ಲಿ ಕುಳಿತರೆ ಇಂಜೆಕ್ಷನ್ ತಗೊಳ್ಳಲೇಬೇಕಾದ ಹೆದರಿಕೆಯ ಸ್ಥಿತಿ ಇದೆ.
ಕೆಲವು ದಿನಗಳ ಹಿಂದೆ ತುಕ್ಕು ಹಿಡಿದ ಚಯರ್ ಗೆ ಮಗುವಿನ ಕೈ ಸಿಲುಕಿ ಗಾಯಗೊಂಡು ವೈದ್ಯರಲ್ಲಿಗೆ ಕರೆದುಕೊಂಡು ಹೋದ ವೇಳೆ ತುಕ್ಕು ಹಿಡಿದಿರುವ ಕಬ್ಬಿಣ ಆಗಿರುವುದರಿಂದ ಇಂಜೆಕ್ಷನ್ ಕಡ್ಡಾಯವಾಗಿ ತಗೊಳ್ಳುವಂತೆ ಸೂಚಿಸಿದ್ದರು.ಜೋರು ಮಳೆ ಬಂದರಂತೂ ಪ್ರಯಾಣಿಕರು ಪರದಾಡುವ ಸ್ಥಿತಿ ಇದೆ ಎಂಬ ಅಳಲನ್ನು ನಿತ್ಯ ಮಂಗಳೂರಿಗೆ ಪಯಾಣಿಸುವ ಪ್ರಯಾಣಿಕರೊಬ್ಬರು ಪ್ರಜಾಪ್ರಕಾಶ ನ್ಯೂಸ್ ನೊಂದಿಗೆ ಹಂಚಿಕೊಂಡಿದ್ದಾರೆ.
ನೂತನ ಬಸ್ ನಿಲ್ದಾಣದ ಕಾಮಗಾರಿಯು ನಿಧನಗತಿಯಲ್ಲಿ ಸಾಗುತಿರುವುದನ್ನು ಗಮನಿಸಿದರೆ ಪೂರ್ಣಗೊಳ್ಳಲು ಇನ್ನೊಂದಷ್ಟು ವರ್ಷ ಹಿಡಿಯಬಹುದು. ಅದರೆ ದಿನಂಪ್ರತಿ ಬಸ್ ಗಾಗಿ ಕಾಯುವ ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ಅನುಕೂಲಕರ ರೀತಿಯಲ್ಲಿ ಸೂಕ್ತವಾದ ತಂಗುದಾಣವನ್ನು ನಿರ್ಮಿಸುವುದಲ್ಲದೇ ತುಕ್ಕು ಹಿಡಿದಿರುವ ಕುರ್ಚಿ ಬದಲಾಯಿಸಿ ಸ್ಚಚ್ಛತೆಯ ಬಗ್ಗೆ ಗಮನ ಹರಿಸುವ ಕೆಲಸ ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕಾಗಿದೆ.