ಬೆಳ್ತಂಗಡಿ: ವಿವಿಧ ರೀತಿಯ ಕಾರ್ಯಕ್ರಮಗಳ ಮೂಲಕ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿರುವ ಉಜಿರೆ ವಲಯ ಬಂಟರ ಸಂಘ ಇತರರಿಗೆ ಮಾದರಿಯಾಗಿದೆ. ಎಂದು ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ ಹೇಳಿದರು.ಅವರು ಉಜಿರೆ ವಲಯ ಬಂಟರ ಸಂಘದ ವತಿಯಿಂದ ಶಾರದ ಮಂಟಪದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಆರೋಗ್ಯ ರಕ್ಷಣೆ ಈಗಿನ ಯುವ ಜನತೆಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ.ಇದಕ್ಕೆ ಕಾರಣ ನಮ್ಮ ಜೀವನ ಶೈಲಿ ಹಾಗೂ ಆಹಾರ ವ್ಯವಸ್ಥೆಗಳು, ನಮ್ಮ ಹಿರಿಯರು ಆರೋಗ್ಯವಂತರಾಗಿರಲು ಅವರು ಸೇವಿಸುತ್ತಿದ್ದ ಪೋಷಕಾಂಶಯುಕ್ತ ಪ್ರಾಕೃತಿಕ ಆಹಾರಗಳು.ನಾವೂ ಕೂಡ ನಮ್ಮ ಮಕ್ಕಳಿಗೆ ಇಂತಹ ಆಹಾರಗಳ ಪರಿಚಯ ಮಾಡಿಕೊಡಬೇಕು ಎಂದರು.
ವಿಶ್ವನಾಥ ಶೆಟ್ಟಿ ಸುಲ್ಕೇರಿ ಅವರು ಮಾತನಾಡಿ ಆಟಿ ತಿಂಗಳ ವಿಶೇಷತೆಗಳು ಆಹಾರ ಪದ್ದತಿ ಹಾಗೂ ತುಳು ನಾಡಿನ ವಿಶೇಷತೆಗಳ ಬಗ್ಗೆ ತಿಳಿಸಿ ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ತುಳು ನಾಡಿನ ಆರಾಧನೆಗಳು, ಸಂಸ್ಕ್ರತಿ, ಆಚಾರ ವಿಚಾರಗಳನ್ನು ಉಳಿಸುವ ದೊಡ್ಡ ಜವಾಬ್ದಾರಿ ಯುವ ಜನತೆಗಿದೆ ಎಂದರು. ತಾಲೂಕು ಮಹಿಳಾ ವಿಭಾಗದ ಅಧ್ಯಕ್ಷೆ ಜಯಲಕ್ಷ್ಮಿ ಎನ್ ಸಾಮಾನಿ ಹಾಗೂ ಯುವ ವಿಭಾಗದ ಅಧ್ಯಕ್ಷ ಪ್ರತೀಕ್ ಶೆಟ್ಟಿ ನೊಚ್ಚ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ನಾರಾಯಣ ಶೆಟ್ಟಿ ಮುಂಡಾಜೆ ಆಟಿದ ಪಾಡ್ದನ ಹಾಡಿದರು. 2024-25 ನೇ ಸಾಲಿನಲ್ಲಿ ಎಸ್. ಎಸ್. ಎಲ್ ಸಿ. ಮತ್ತು ಪಿ.ಯು.ಸಿ.ಯಲ್ಲಿ ಶೇ 90 ಕ್ಕಿಂತ ಹೆಚ್ಚು ಅಂಕ ಪಡೆದ ಉಜಿರೆ ವಲಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸುಮಾರು 40ಕ್ಕಿಂತಲೂ ಅಧಿಕ ಬಗೆಯ ವಿವಿಧ ಆಹಾರ ಖಾದ್ಯಗಳನ್ನು ಸವಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಬಂಟರ ಸಂಘ ಉಜಿರೆ ವಲಯದ ಅಧ್ಯಕ್ಷೆ ವನಿತಾ.ವಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಸಂಜೀವ ಶೆಟ್ಟಿ ಕುಂಟಿನಿ ಸ್ವಾಗತಿಸಿ,
ಕಾರ್ಯದರ್ಶಿ ಸುದೇಶ್ ಶೆಟ್ಟಿ , ಧನ್ಯವಾದವಿತ್ತರು, ರವೀಂದ್ರ ಶೆಟ್ಟಿ ಬಳೆಂಜ ನಿರೂಪಿಸಿದರು. ಬಂಟರ ಯಾನೆ ನಾಡವರ ಸಂಘದ ಪದಾಧಿಕಾರಿಗಳು ಉಜಿರೆ ಮುಂಡಾಜೆ ಸಮಿತಿಗಳ ಪದಾಧಿಕಾರಿಗಳು ಉಜಿರೆ ವಲಯದ ಬಂಟ ಬಾಂಧವರು ಭಾಗವಹಿಸಿದ್ದರು.