ಬೆಳ್ತಂಗಡಿ: ತಾಲೂಕಿನ ವಿವಿಧ ಕಡೆಗಳಲ್ಲಿ ಅಲ್ಲಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತಿದ್ದು, ಅಧಿಕಾರಿಗಳ ಗಮನಕ್ಕೆ ಇದ್ದರೂ ಮೌನವಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಾಲೂಕಿನ ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಂದ್ಕೂರು ಮಂಜೊಟ್ಟಿ ಸಂಪರ್ಕಿಸುವ ಕೊಲ್ಲೊಟ್ಟು ಎಂಬಲ್ಲಿ ಸೋಮವತಿ ನದಿಯಲ್ಲಿ ಅಕ್ರಮವಾಗಿ ಕಳೆದ ಎರಡು ವಾರಗಳಿಂದ ಅವ್ಯಾಹತವಾಗಿ ಮರಳುಗಾರಿಕೆ ನಡೆಯುತಿದ್ದು,ಈ ಬಗ್ಗೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯತ್ ನ ಗಮನಕ್ಕೂ ಬಾರದೇ ಅಕ್ರಮ ನಡೆಯುತಿದೆ. ಈ ಬಗ್ಗೆ ಪ್ರಶ್ನಿಸಿದಾಗ ಪಂಚಾಯತ್ ಅನುಮತಿಯಂತೆ ಅಲ್ಲೆ ನಿರ್ಮಾಣವಾಗುತ್ತಿರುವ ಕಿಂಡಿ ಅಣೆಕಟ್ಟಿನ ಕಾಮಗಾರಿಗಾಗಿ ಮರಳು ತೆಗೆಯಲಾಗುತ್ತಿದೆ ಎಂಬ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಅದರೆ ಈ ಬಗ್ಗೆ ಪಂಚಾಯತ್ ಗೆ ಯಾವುದೇ ಮಾಹಿತಿ ಇಲ್ಲದೇ ಲಾರಿ ಮೂಲಕ ಮರಳು ಬೇರೆ ಕಡೆ ಸಾಗಿಸಲಾಗುತ್ತಿದೆ.ನದಿಯಲ್ಲಿ ಕಳೆದ ಕೆಲವು ದಿನಗಳಿಂದ ಎರಡು ಹಿಟಾಚಿಯಲ್ಲಿ ಮರಳನ್ನು ನದಿಯಲ್ಲಿಯೇ ಸ್ವಚ್ಛಗೊಳಿಸಿ ಸಾಗಿಸಲಾಗುತ್ತಿದೆ. ಅಕ್ರಮ ಮರಳುಗಾರಿಕೆ ನಡೆಯುವ ಪಕ್ಕದಲ್ಲೇ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿದ್ದು. ಇದರ ಕಾಮಗಾರಿ ಹೆಸರಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ.
ರಾಜರೋಷವಾಗಿ ನಡೆಯುತ್ತಿರುವ ಈ ಅಕ್ರಮ ಮರಳುಗಾರಿಕೆಗೆ ಪ್ರಭಾವಿಗಳ ಬೆಂಬಲ ಇರುವ ಕಾರಣಕ್ಕೆ ಯಂತ್ರಗಳ ಮೂಲಕ ದಂಧೆ ನಡೆಯುತ್ತಿರುವ ಬಗ್ಗೆ ಸ್ಥಳೀಯರಲ್ಲಿ ಅನುಮಾನ ಮೂಡುತಿದ್ದು , ಸ್ಥಳಕ್ಕೆ ಅಧಿಕಾರಿಗಳು ತೆರಳಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂಬುವುದಾಗಿ ಆಗ್ರಹಿಸಿದ್ದಾರೆ.