ಬೆಳ್ತಂಗಡಿ:ತಾಲೂಕಿನ ಕಲ್ಮಂಜ ಗ್ರಾಮದ ಮೂಲಾರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ಇದರ ದುರಸ್ತಿ ಕಾರ್ಯ ಪ್ರಾರಂಭವಾಗಿದೆ. . ಶಾಲೆಯ ಚಾವಣಿ ಅಲ್ಲಲ್ಲಿ ಕುಸಿದು ಅಪಾಯದ ಅಂಚಿನಲ್ಲಿರುವ ಈ ಶಾಲೆಯ 50 ವರ್ಷಕ್ಕಿಂತ ಹಳೆಯದಾದ ರೀಪು, ಪಕ್ಕಾಸುಗಳು ಮುರಿದು ಹೆಂಚುಗಳು ನೇತಾಡಿಕೊಂಡಿದ್ದು ಶಾಲಾ ಮಕ್ಕಳನ್ನು ತರಗತಿ ಕೊಠಡಿಯೊಳಗೆ ಕುಳ್ಳಿರಿಸಲು ಭಯದ ಸ್ಥಿತಿ ನಿರ್ಮಾಣವಾಗಿತ್ತು. ಜೋರಾದ ಮಳೆ,ಗಾಳಿ ಬಂದರೆ ಶಾಲೆಗೆ ರಜೆ ನೀಡುವ ಅನಿವಾರ್ಯತೆಯು ಎದುರಾಗಿತ್ತು.ಇದರಿಂದ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿತ್ತು.
ಈ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ವಿಸ್ಕ್ರತ ವರದಿಯನ್ನು ಕಳೆದ ಜೂನ್ 12 ರಂದು ವಿಡಿಯೋ ಸಹಿತ ಪ್ರಕಟಿಸಿತ್ತು.
ಒಟ್ಟು ಐದು ತರಗತಿ ಇರುವ ಈ ಶಾಲೆಯಲ್ಲಿ 11 ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಒಂದನೇ ತರಗತಿಯಲ್ಲಿ-1 ಎರಡನೇ ತರಗತಿಯಲ್ಲಿ- 0,ಮೂರನೇ ತರಗತಿಯಲ್ಲಿ-4, ನಾಲ್ಕನೇ ತರಗತಿಯಲ್ಲಿ-3, ಐದನೇ ತರಗತಿಯಲ್ಲಿ-3 ವಿದ್ಯಾರ್ಥಿಗಳಿದ್ದಾರೆ9 ಸುಮಾರು 5 ಕಿಮೀ. ವ್ಯಾಪ್ತಿಗೆ ಇದೊಂದೇ ಶಾಲೆಯಾಗಿದೆ. ನಿಯೋಜಿತ ಶಿಕ್ಷಕರೊಬ್ಬರು ಮುಖ್ಯ ಶಿಕ್ಷಕರಾಗಿ ಹಾಗೂ ಓರ್ವ ಅತಿಥಿ ಶಿಕ್ಷಕಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಶಾಲೆಯ ಮೇಲ್ಚಾವಣಿ ದುರಸ್ತಿಗೆ ಶಿಕ್ಷಣ ಇಲಾಖೆಯಿಂದ ಶಾಸಕಹರೀಶ್ ಪೂಂಜ ಅವರ ಮುತುವರ್ಜಿಯಲ್ಲಿ 3 ಲಕ್ಷ ರೂ. ದುರಸ್ತಿ ಅನುದಾನ ಬಿಡುಗಡೆಯಾಗಿದ್ದು ಇದೀಗ ಶಾಲೆಯ ಚಾವಣಿಯನ್ನುಸಂಪೂರ್ಣ ಬಿಚ್ಚಿ ಹೊಸ ರೀಪು (ಕಬ್ಬಿಣ), ಪಕ್ಕಾಸುಗಳನ್ನು ಅಳವಡಿಸಿ ಚಾವಣಿ ನಿರ್ಮಿಸುವ ಕೆಲಸ ಆರಂಭವಾಗಿದೆ. ಕಾರ್ಮಿಕರ ಜತೆ ಸ್ಥಳೀಯರು ಮತ್ತು ಪೋಷಕರು ಶ್ರಮದಾನದ ಮೂಲಕ ಸಹಾಯ ಹಸ್ತ ಚಾಚಿದ್ದಾರೆ. ಇದರಿಂದ ಮುಂದಿನ ಶೈಕ್ಷಣಿಕ ವರ್ಷಕ್ಕೆ ಶಾಲೆ ಸುಸ್ಥಿತಿಯಲ್ಲಿರಲಿದೆ.
ಕೈ ಜೋಡಿಸಿದ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್
ಪ್ರಜಾಪ್ರಕಾಶ ನ್ಯೂಸ್ ವರದಿ ಬೆನ್ನಲ್ಲೇ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಮೋಹನ್ ಕುಮಾರ್ ಅವರು ಶಾಲೆಯ ಬಗ್ಗೆ ಮಾಹಿತಿ ಪಡೆದುಕೊಂಡು ನವೀಕರಣ ಮಾಡಿಕೊಡುವ ಭರವಸೆ ನೀಡಿದ್ದರು.
ಸರಕಾರದ ಅನುದಾನದಲ್ಲಿ ಶಾಲಾ ಮೇಲ್ಚಾವಣಿ ದುರಸ್ತಿಯಾಗುತಿದ್ದು, ಟೈಲ್ಸ್ ಅಳವಡಿಕೆ, ಪೈಂಟಿಂ,ಗ್ ಗೋಡೆಗಳಲ್ಲಿ ವಿಶಿಷ್ಟ ಚಿತ್ತಾರ ಸಹಿತ ಇತರ ಅಗತ್ಯ ಕೆಲಸಗಳನ್ನು ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಮಾಡಿಕೊಡಲಿದೆ. ಚಾವಣಿಯ ಕೆಲಸ ಪೂರ್ಣಗೊಂಡ ಕೂಡಲೇ ಈ ಕೆಲಸಗಳು ಶಾಲಾ ರಾಜಾ ದಿನಗಳಲ್ಲಿ ನಡೆಯಲಿವೆ.
ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಗ್ರಾಮೀಣ ಸರಕಾರಿ ಶಾಲೆಗಳಿಗೆ ಕಾಯಕಲ್ಪ ನೀಡುವ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದು ಇದುವರೆಗೆ ಮುಂಡತ್ತೋಡಿ, ಉಜಿರೆ ಹಳೆಪೇಟೆ ,ಕಲ್ಮಂಜ ಪ್ರೌಢಶಾಲೆ,ಪೆರಿಯಡ್ಕ, ಲಾಯಿಲದ ಕರ್ನೋಡಿ ಶಾಲೆಗಳ ನವೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ಮೂಲಾರು ಶಾಲೆ ಈ ಯೋಜನೆ 6ನೇ ಶಾಲೆಯಾಗಿದೆ.
ಶಿಕ್ಷಣಕ್ಕೆ ಸಹಕಾರ,ಮೋಹನ್ ಕುಮಾರ್
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣಕ್ಕೆ ಸಹಕಾರವಾಗುವ ಚಿಂತನೆಯಿಂದ ಸರಕಾರಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡಲಾಗುತ್ತದೆ.ಊರಿನ ಹಿರಿಯರು ಹಿಂದೆ ನಿರ್ಮಿಸಿದ ಶಾಲೆಗಳು ಉಳಿಯಬೇಕು ಎಂಬ ನಿಟ್ಟಿನಲ್ಲಿ ಮಕ್ಕಳ ಸಂಖ್ಯೆಯನ್ನು ಪರಿಗಣಿಸದೆ ಸಹಾಯ ಹಸ್ತ ನೀಡುವುದು ಟ್ರಸ್ಟ್ ನ ಉದ್ದೇಶವಾಗಿದೆ.ಎಂದು ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ಕುಮಾರ್ ತಿಳಿಸಿದ್ದಾರೆ.