ವರದಕ್ಷಿಣೆ ಕಿರುಕುಳ,ಪತ್ನಿಗೆ ಮಾರಣಾಂತಿಕ ಹಲ್ಲೆ: ಧರ್ಮಸ್ಥಳ ಸಬ್ ಇನ್ಸ್ ಪೆಕ್ಟರ್ ವಿರುದ್ಧ ದೂರು ದಾಖಲು: ಕುಟುಂಬಸ್ಥರಿಂದಲೂ ನಿರಂತರ ಕಿರುಕುಳ,ಬೆಲ್ಟ್ ನಿಂದ ಹಲ್ಲೆ: ಆರೋಪ

 

 

ಬೆಂಗಳೂರು: ವರದಕ್ಷಿಣೆಗಾಗಿ ಕಿರುಕುಳ ನೀಡಿ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಸಬ್ ಇನ್​ಸ್ಪೆಕ್ಟರ್ ವಿರುದ್ಧ ಪತ್ನಿ ದೂರು ನೀಡಿದ್ದು, ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 ವರ್ಷದ ಪತ್ನಿ ವರ್ಷಾ ಅವರು ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್​ಪೆಕ್ಟರ್​​ ಆಗಿರುವ ಪತಿ ಕಿಶೋರ್ ಕುಮಾರ್ ಹಾಗೂ ಮನೆಯವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹಲ್ಲೆ ಘಟನೆಯು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಕೃತ್ಯ ನಡೆದ ಸ್ಥಳ ಆಧರಿಸಿ ಪ್ರಕರಣ ವರ್ಗಾವಣೆ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ದೂರಿನಲ್ಲಿ ಇರುವುದೇನು?:

2024ರಲ್ಲಿ ಪಿಎಸ್ಐ ಕಿಶೋರ್​ನೊಂದಿಗೆ ವರ್ಷಾಳ ಮದುವೆಯಾಗಿತ್ತು. ವರದಕ್ಷಿಣೆ ರೂಪದಲ್ಲಿ 10 ಲಕ್ಷ ನಗದು, 23 ಲಕ್ಷ ಮೌಲ್ಯದ ಕ್ರೇಟಾ ಕಾರು, 135 ಗ್ರಾಂ ಚಿನ್ನವನ್ನು ಪೋಷಕರು ನೀಡಿದ್ದರು. ಅಲ್ಲದೇ, ವಿವಾಹ ವೇಳೆ 900 ಗ್ರಾಂ ಚಿನ್ನ ನೀಡಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು.

 

ವಿವಾಹ ಆರಂಭದಲ್ಲಿ ಪತಿಯು ತನ್ನೊಂದಿಗೆ ಅನೋನ್ಯವಾಗಿದ್ದ. ಮೂಡಿಗೆರೆಯಲ್ಲಿ ಪಿಎಸ್​ಐ ಆಗಿ ಕರ್ತವ್ಯ ವೇಳೆ ಕಿಶೋರ್ ಬೇರೆ ಠಾಣೆಗೆ ವರ್ಗಾವಣೆಗಾಗಿ 10 ಲಕ್ಷ ರೂ. ತಂದುಕೊಡುವಂತೆ ಒತ್ತಾಯಿಸಿದ್ದರು. ಹಣ ತರದಿದ್ದಕ್ಕೆ ತನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ. ಅಲ್ಲದೇ ಗಂಡನ ಪೋಷಕರು ಹಾಗೂ ಬಾಮೈದುನ ತನ್ನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದರು, ಅದಲ್ಲದೇ ಪೊಲೀಸ್ ಬೆಲ್ಟ್ ನಿಂದಲೂ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ವರ್ಷಾ ಆರೋಪಿಸಿದ್ದಾರೆ.

ಮಾನಸಿಕ ಕಿರುಕುಳ ನೀಡಿ ಗೃಹ ಬಂಧನದಲ್ಲಿರಿಸಿ ಚಿತ್ರಹಿಂಸೆ ನೀಡಿದ್ದಾರೆ. ಹಲ್ಲೆ ಮಾಡಿರುವುದನ್ನ ಯಾರಿಗಾದರೂ ತಿಳಿಸಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ಮಹಿಳೆ ಆಪಾದಿಸಿದ್ದಾರೆ.

error: Content is protected !!