ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಹಕ್ಕಿ ಜ್ವರ: ಬಳ್ಳಾರಿಯಲ್ಲಿ 2 ಸಾವಿರಕ್ಕೂ ಅಧಿಕ ಕೋಳಿಗಳು ಸಾವು: ಮನುಷ್ಯರೂ ಸೋಂಕಿನ ಬಾಧೆಗೊಳಗಾಗುವ ಸಾಧ್ಯತೆ.! ಮುನ್ನಚ್ಚರಿಕೆಯ ಕ್ರಮವೇನು?

ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿ ಹಕ್ಕಿ ಜ್ವರ ಹೆಚ್ಚಾಗುತ್ತಿದ್ದು, ಬಳ್ಳಾರಿಯ ಕುರೆಕುಪ್ಪ ಜಾನುವಾರು ಸಂವರ್ಧನ ಕೇಂದ್ರದಲ್ಲಿ ಸಾಕಲಾಗದ್ದ 2,400 ಕೋಳಿಗಳು ಒಂದು ವಾರದ ಅವಧಿಯಲ್ಲಿ ಮೃತಪಟ್ಟಿವೆ.
ಆರಂಭದಲ್ಲಿ ನಿತ್ಯ 20 ರಿಂದ 30 ಕೋಳಿ ಮೃತಪಟ್ಟರೆ, ನಂತರದ ದಿನಗಳಲ್ಲಿ ನಿತ್ಯ 100 ರಿಂದ 200 ಕೋಳಿಗಳು ಸಾವಿಗೀಡಾದವು. ಸಾವಿಗೆ ಹಕ್ಕಿ ಜ್ವರವೇ ಕಾರಣವೆಂದು ಪ್ರಯೋಗಾಲಯದ ಪರೀಕ್ಷೆಯಿಂದ ದೃಢಪಟ್ಟಿದೆ.

ವರದಿಯ ಬೆನ್ನಲ್ಲೆ 1,020 ಕೋಳಿಗಳನ್ನು ವಧೆ ಮಾಡಲಾಗಿದೆ. ಸೋಂಕು ಹರಡದಂತೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ವಿನೋದ್ ಕುಮಾರ್ ತಿಳಿಸಿದರು.

ಹಕ್ಕಿ ಜ್ವರ ವೈರಾಣುಗಳಿಂದ ಹರಡುವುದಲ್ಲದೆ, ಸೋಂಕು ತಗುಲಿದ ಹಕ್ಕಿಗಳು ವಿಸರ್ಜಿಸುವ ಮಲ-ಮೂತ್ರದಿಂದಲೂ ಈ ರೋಗ ಹರಡುತ್ತದೆ. ಜೊತೆಗೆ ಆ ಹಕ್ಕಿಗಳ ಶ್ವಾಸೋಚ್ವಾಸ ಕ್ರಿಯೆ ಮತ್ತು ರಕ್ತದಿಂದ ಹರಡುತ್ತದೆ.

ಮನುಷ್ಯರೂ ಈ ಸೋಂಕಿನ ಬಾಧೆಗೊಳಗಾಗುವ ಸಾಧ್ಯತೆಯಿದೆ. ಸೋಂಕು ತಗುಲಿದ ಕೋಳಿ ಮರಿಗಳ ಪೊರೆಗಳನ್ನು ಬಿಡಿಸುವ ಹಾಗೂ ವಧೆ ಮಾಡುವ ಕಾರ್ಯನಿರತರಿಗೂ ಹಕ್ಕಿ ಜ್ವರ ಸೋಂಕುವ ಸಂಭವವಿರುತ್ತದೆ. ಇದು ಶೀತ ರೋಗ ಚಿಹ್ನೆಗಳಿಂದ ಪ್ರಾರಂಭವಾಗಿ ತೀವ್ರತರ ನ್ಯೂಮೋನಿಯಕ್ಕೆ ತಿರುಗಿ ಮರಣಕ್ಕೂ ಕಾರಣವಾಗಬಹುದು ಎನ್ನುತ್ತಾರೆ ಪಶು ವೈದ್ಯರು.

ಒಂದು ವೇಳೆ ಮನೆಯಲ್ಲಿ ಸೋಂಕು ತಗುಲಿದ್ದ ಕೋಳಿ, ಹಕ್ಕಿಗಳಿದ್ದ ಮುಂಜಾಗೃತಕ್ರಮವಾಗಿ ಅವುಗಳ ಪುಕ್ಕ ತೆಗೆಯಬಾರದು, ಕೈಯಿಂದ ಮುಟ್ಟಬಾರದು. ಮಕ್ಕಳನ್ನು ಅಂತಹ ಹಕ್ಕಿಗಳ ಸ್ಪರ್ಶ ಮಾಡುವುದಕ್ಕೆ ಇಲ್ಲವೇ ಅವುಗಳೊಂದಿಗೆ ಆಟವಾಡುವುದಕ್ಕೆ ಇಲ್ಲವೇ ಸಾಗಣೆಗೆ ಬಿಡಬಾರದು.

ಯಾರೇ ಆಗಲಿ ಹಕ್ಕಿಗಳನ್ನು ಕೈಯಿಂದ ಮುಟ್ಟಿದ ನಂತರ ಕೈಗಳನ್ನು ಸಾಬೂನಿಂದ ಸ್ವಚ್ಛವಾಗಿ ತೊಳೆಯಬೇಕು. ಕೋಳಿ ಮರಿಗಳನ್ನು ಮುಟ್ಟುವ ಸಂದರ್ಭದಲ್ಲಿ ಮೂಗು ಮತ್ತು ಬಾಯಿಗೆ ದಪ್ಪ ಬಟ್ಟೆಯ ಮಾಸ್ಕ್ ಹಾಕಿಕೊಳ್ಳಬೇಕು. ಹಕ್ಕಿಗಳನ್ನು ಮುಟ್ಟಿದ ನಂತರ ಕೈಗಳಿಂದ ಕಣ್ಣು, ಮೂಗು ಅಥವಾ ಬಾಯಿಯನ್ನು ಉಜ್ಜಿಕೊಳ್ಳದಂತೆ ಎಚ್ಚರವಹಿಸಬೇಕು ಎಂದು ತಿಳಿಸಲಾಗಿದೆ.

error: Content is protected !!