ಪುಣೆ: ಜನನಿಬಿಡ ಸ್ವರ್ಗೇಟ್ ಬಸ್ ನಿಲ್ದಾಣದ ಮಧ್ಯದಲ್ಲಿ ಮತ್ತು ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿ ನಿಲ್ಲಿಸಿದ್ದ ಸರ್ಕಾರಿ ಬಸ್ಸಿನೊಳಗೆ ಫೆ.25ರಂದು 26 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆದದ್ದು, ಪ್ರಕರಣದ ಬೆನ್ನತ್ತಿದ ಪೊಲೀಸ್ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.
ಮಹಿಳೆ ಮೇಲೆ ಅತ್ಯಾಚಾರ ನಡೆದ ಬಸ್ಸಿನ ಸಮೀಪವೇ ಹಳೆಯ ಬಳಕೆಯಾಗದ ಬಸ್‌ಗಳನ್ನು ನಿಲ್ಲಿಸಲಾಗಿತ್ತು. ಈ ಎಲ್ಲಾ ಬಸ್‌ಗಳಲ್ಲಿ ಬಳಕೆಯಾದ ರಾಶಿ, ರಾಶಿ ಕಾಂಡೋಮ್ ಗಳು, ಮದ್ಯದ ಬಾಟಲಿಗಳು, ಸಿಗರೇಟ್ ಪ್ಯಾಕ್‌ಗಳು, ಮಹಿಳೆಯರ ಬಟ್ಟೆಗಳು ಸೇರಿದಂತೆ ಹತ್ತಾರು ವಸ್ತುಗಳು ಪತ್ತೆಯಾಗಿದ್ದು, ಇದು ಅಪರಾಧ ಚಟುವಟಿಕೆಗಳ ತಾಣವಾಗಿತ್ತು ಎಂದು ತಿಳಿದುಬಂದಿದೆ.
ಅತ್ಯಾಚಾರ ಪ್ರಕರಣದ ಆರೋಪಿಯನ್ನು ದತ್ತಾತ್ರೇಯ ಗಡೆ ಎಂದು ಗುರುತಿಸಲಾಗಿದೆ. ಪೊಲೀಸರು ಆತನನ್ನು ಪತ್ತೆಹಚ್ಚಲು ಎಂಟು ತಂಡಗಳನ್ನು ರಚಿಸಿದ್ದಾರೆ ಎಂದು ತಿಳಿಸಲಾಗಿದೆ.
ಈ ಪ್ರಕರಣ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು, ಶಿವಸೇನೆ (ಯುಬಿಟಿ)ಯ ಸುಷ್ಮಾ ಅಂಧಾರೆ ಮತ್ತು ಕಸ್ಬಾದ ಮಾಜಿ ಶಾಸಕ ರವೀಂದ್ರ ಧಂಗೇಕರ್ ಮತ್ತು ಎಎಪಿಯ ಮುಕುಂದ್ ಕಿರ್ದತ್ ಅವರಂತಹ ನಾಯಕರು ನಗರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿವಸೇನೆ ನಾಯಕ ವಸಂತ್ ಮೋರ್ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿರುವ ಭದ್ರತಾ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ.
ಕಳಪೆ ಬಸ್‌ಗಳನ್ನು ಸ್ವರ್ಗೇಟ್ ಬಸ್ ನಿಲ್ದಾಣದ ಬಳಿ ವಸತಿಗೃಹವಾಗಿ ಬಳಸಲಾಗುತ್ತಿದ್ದು, ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿ ಈ ಘಟನೆ ನಡೆದಿರುವುದು ಮತ್ತಷ್ಟು ಕಳವಳಕಾರಿಯಾಗಿದೆ.