ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ದೇಶದೆಲ್ಲೆಡೆ ಶಿವರಾತ್ರಿ ಸಂಭ್ರಮ ಜೋರಾಗಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು ಈ ಮಧ್ಯೆ 45 ದಿನಗಳ ಮಹಾಕುಂಭ ಮೇಳಕ್ಕೆ ಇಂದು ಅದ್ದೂರಿ ತೆರೆ ಬೀಳಲಿದೆ.
12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳವು 2025ರ ಜನವರಿ 13 ರಂದು ಆರಂಭವಾಗಿ ಇಂದಿಗೆ 45 ದಿನಗಳಾಯಿತು. ಈವರೆಗೆ ಸುಮಾರು 64 ಕೋಟಿ ಭಕ್ತರು ಕುಂಭಮೇಳದಲ್ಲಿ ಪಾಲ್ಗೊಂಡಿದ್ದಾರೆ ಎಂದು ಅಂಕಿ- ಅಂಶಗಳು ಹೇಳುತ್ತಿವೆ.
ಇಂದು ಮಹಾಕುಂಭದ ಕೊನೆಯ ದಿನವಾದ್ದರಿಂದ ಪುಣ್ಯಸ್ನಾನಕ್ಕಾಗಿ ಮಧ್ಯರಾತ್ರಿಯಿಂದಲೇ ತ್ರಿವೇಣಿ ಸಂಗಮದ ಬಳಿ ಹೆಚ್ಚಿನ ಭಕ್ತರು ಸೇರಲು ಆರಂಭಿಸಿದ್ದು, ಕೆಲವರು ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಲು ತಾಳ್ಮೆಯಿಂದ ಕಾಯುತ್ತಿದ್ದಾರೆ. ನಿನ್ನೆ ಒಟ್ಟು 1.33 ಕೋಟಿ ಭಕ್ತರು ತ್ರಿವೇಣಿ ಸಂಗಮ ಮತ್ತು ಇತರ ಘಾಟ್‌ಗಳಲ್ಲಿ ಪವಿತ್ರ ಸ್ನಾನ ಕೈಗೊಂಡಿದ್ದಾರೆ. ನೇಪಾಳದಿಂದ ಯಾತ್ರಿಕರ ಗುಂಪು ಕೂಡ ಪವಿತ್ರ ಸ್ನಾನಕ್ಕಾಗಿ ಬಂದಿದೆ.
ಇಂದು ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆ ಮುಂಜಾಗ್ರತಾ ಕ್ರಮವನ್ನು ಅಲ್ಲಿನ ಆಡಳಿತ ಮಂಡಳಿ ಕೈಗೊಂಡಿದ್ದು, ಕುಂಭಮೇಳ ಪ್ರದೇಶದಲ್ಲಿ ವಾಹನ ರಹಿತ ವಲಯವನ್ನು ಜಾರಿಗೊಳಿಸಲಾಗಿದೆ.
ಮಹಾಕುಂಭ 6 ವಿಶೇಷ ಸ್ನಾನಕ್ಕೆ ಸಾಕ್ಷಿದ್ದು ವಿಶೇಷವಾಗಿದೆ. ಜನವರಿ 13 ರಂದು ಪುಷ್ಯ ಹುಣ್ಣಿಮೆ, ಜನವರಿ 14 ರಂದು ಮಕರ ಸಂಕ್ರಾಂತಿ, ಜನವರಿ 29 ರಂದು ಮೌನಿ ಅಮವಾಸ್ಯೆ, ಫೆಬ್ರವರಿ 3 ರಂದು ವಸಂತ ಪಂಚಮಿ, ಫೆಬ್ರವರಿ 12 ರಂದು ಮಾಘಿ ಪೂರ್ಣಿಮೆ ಮತ್ತು ಫೆಬ್ರವರಿ 26 ರಂದು ಮಹಾಶಿವರಾತ್ರಿ ಜತೆಗೆ ಮೂರು ‘ಅಮೃತ ಸ್ನಾನ’ ಮಾಡಲಾಗಿದೆ.