ಮಂಗಳೂರು: ಜಾಗ್ವಾರ್ ವಿಮಾನವನ್ನು ಮುನ್ನಡೆಸುವ ಅವಕಾಶವನ್ನು ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪಡೆದಿದ್ದಾರೆ. ಅದು ಕೂಡ ಮಂಗಳೂರು ಮೂಲದ ಫ್ಲೆಯಿಂಗ್ ಆಫೀಸರ್ ತನುಷ್ಕಾ ಸಿಂಗ್ ಅವರಿಗೆ ಈ ಸುವರ್ಣಾವಕಾಶ ಲಭಿಸಿದೆ.
ಜಾಗ್ವಾರ್ ಯುದ್ಧ ವಿಮಾನ ಸ್ಕ್ವಾಡ್ರನ್‌ನಲ್ಲಿ ಪೈಲಟ್ ಆಗಿ ಆಯ್ಕೆಯಾಗಿರುವ ಫ್ಲೆಯಿಂಗ್ ಆಫೀಸರ್ ತನುಷ್ಕಾ ಸಿಂಗ್ ಮಿಲಿಟರಿ ಹಿನ್ನೆಲೆಯ ಕುಟುಂಬದವರು. ಅವರ ತಂದೆ, ಅಜ್ಜ ಎಲ್ಲರೂ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ತಂದೆ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಅಜಯ್ ಪ್ರತಾಪ್ ಸಿಂಗ್ ಅವರು ಪ್ರಸ್ತುತ ಎಂಆರ್‌ಪಿಎಲ್ ಸಂಸ್ಥೆಯ ಎಚ್‌ಎಸ್‌ಇ ವಿಭಾಗದಲ್ಲಿ ಜನರಲ್ ಮ್ಯಾನೇಜರ್ ಆಗಿದ್ದಾರೆ.
ತನುಷ್ಕಾ ಸಿಂಗ್ ಮೂಲತಃ ಉ.ಪ್ರದೇಶದವರಾದರೂ 2007ರಿಂದ ಮಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಹಾಗಾಗಿ “ನಾನು ಕುಡ್ಲದವಳು’ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಅವರು ಸುರತ್ಕಲ್ ಡಿಪಿಎಸ್ ಎಂಆರ್‌ಪಿಎಲ್ ಶಾಲೆಯಲ್ಲಿ ಎಸೆಸೆಲ್ಸಿ, ಮಂಗಳೂರಿನ ಶಾರದಾ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ವಿಜ್ಞಾನ ಶಿಕ್ಷಣದ ಬಳಿಕ ಮಣಿಪಾಲ ಎಂಐಟಿಯಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ನಲ್ಲಿ 2022ರಲ್ಲಿ ಬಿ.ಟೆಕ್. ಪದವಿ ಗಳಿಸಿದ್ದಾರೆ. ಚಿಕ್ಕಂದಿನಿಂದಲೂ ಸೇನೆಗೆ ಸೇರಬೇಕೆಂಬ ಹಂಬಲವಿದ್ದ ಇವರು, ವಾಯುಪಡೆಗೆ ಸೇರುತ್ತೇನೆ, ಅದರಲ್ಲೂ ಸಮರ ವಿಮಾನದ ಪೈಲಟ್ ಆಗುತ್ತೇನೆ ಎಂದು ಯಾವತ್ತೂ ಯೋಚಿಸಿರಲಿಲ್ಲ ಎನ್ನುತ್ತಾರೆ.
ತನುಷ್ಕಾ ಸಿಂಗ್ ಅವರು ಶಾರ್ಟ್ ಸರ್ವಿಸ್ ಕಮಿಷನ್ ಮೂಲಕ ಭಾರತೀಯ ಸೇನೆಯನ್ನು ಸೇರಲು ಬಯಸಿದ್ದರು. ಆದರೆ ಅಲ್ಲಿ ಮಹಿಳೆಯರಿಗೆ ಹುದ್ದೆಯ ಅವಕಾಶ ಕಡಿಮೆ ಇತ್ತು, ಹಾಗಾಗಿ ವಾಯುಪಡೆ ಯನ್ನು ಆಯ್ಕೆ ಮಾಡಿಕೊಂಡರು. ಆಯ್ಕೆಯ ಬಳಿಕ ಒಂದೂವರೆ ವರ್ಷ ಕಾಲ ವಾಯುಪಡೆಯ ಕೆಡೆಟ್ ಆಗಿ ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ವಾಯುಪಡೆ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆದರು. ಅಲ್ಲಿ ಕಮಿಷನ್‌ರ್ ಅಧಿಕಾರಿಯಾಗಿ ಭಡ್ತಿ ಪಡೆದು ಒಂದು ವರ್ಷ ಕಾಲ ಯುದ್ಧ ವಿಮಾನಗಳ ಪೈಲಟ್ ಆಗಿ ತರಬೇತಿ ಪಡೆದಿದ್ದಾರೆ. ಈ ವೇಳೆ ಅವರು ಹಾಕ್ ಎಂಕೆ 132 ವಿಮಾನವನ್ನು ಚಲಾಯಿದ್ದಾರೆ.
ಸದ್ಯ ರಜೆಯಲ್ಲಿ ಊರಿಗೆ ಬಂದಿ ರುವ ತನುಷ್ಕಾ ಶೀಘ್ರವೇ ವಿರಾಮ ಪೂರೈಸಿ ಭಾರತೀಯ ವಾಯು ಪಡೆಯ ಜಾಗ್ವಾರ್ ಸ್ಕ್ವಾಡ್ರನ್ ಸೇರಿಕೊಳ್ಳಲಿದ್ದಾರೆ.
‘ನಾನು ಬಯಸಿದ ಇದೇ ನಿಜವಾದ ಬದುಕು’
ತನ್ನ ಸಾಧನೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡ ತನುಷ್ಕಾ, ಮೊದಲ ಬಾರಿ ತರಬೇತಿ ವಿಮಾನವನ್ನೇರಿ ಕಸರತ್ತು ನಡೆಸಿದಾಗ ಯಾವುದೇ ಭಯವಾಗಲಿಲ್ಲ, ಸಂಭ್ರಮವಾಯಿತು, ಅಷ್ಟೇ ಅಲ್ಲ ಇದೇ ನಾನು ಬಯಸಿದ ನಿಜವಾದ ಬದುಕು ಎನ್ನಿಸಿತು ಎನ್ನುತ್ತಾರೆ ತನುಷ್ಕಾ. ಸೇನೆ ಸೇರುವುದಕ್ಕೆ ಅಪಾರ ಆತ್ಮವಿಶ್ವಾಸಬೇಕು, ಪ್ರಾಮಾಣಿಕತೆಬೇಕು, ನಾಯಕತ್ವದ ಗುಣಲಕ್ಷಣಗಳಿರಬೇಕು, ಅಷ್ಟಿದ್ದ ಯಾರೇ ಆದರೂ ಸೈನ್ಯಕ್ಕೆ ಸೇರುವ ಯತ್ನ ಮಾಡಬಹುದು. ನಾನು ಮಂಗಳೂರಿನವಳು ಎನ್ನುವುದೇ ಹೆಮ್ಮೆ, ನನ್ನ ಮೂಲ ಊರು ಲಕ್ನೋ ಆದರೂ ಮಂಗಳೂರಿನಲ್ಲಿ ನೆಲೆಸಿದ್ದೇನೆ, ಕನ್ನಡ ಮಾತನಾಡುತ್ತೇನೆ, ತುಳು ಕಲಿಯಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.