ಮಲ್ಪೆ ಆಳ ಸಮುದ್ರದಲ್ಲಿ ಅನುಮಾನಸ್ಪದ ವಿದೇಶಿ ಬೋಟ್ ಪತ್ತೆ: ಮಾಲೀಕನಿಂದ ಪ್ರಾಣಭಯ: ಓಮನ್ ಹಾರ್ಬರ್‌ನಿಂದ ಮೀನುಗಾರರು ಎಸ್ಕೇಪ್: ತಮಿಳುನಾಡು ಮೂಲದ ಮೀನುಗಾರರು ವಶಕ್ಕೆ

ಉಡುಪಿ: ಮಲ್ಪೆಯ ಸೈಂಟ್ ಮೇರಿಸ್ ದ್ವೀಪದಲ್ಲಿ ಅನುಮಾನಸ್ಪದ ವಿದೇಶಿ ಬೋಟ್ ಪತ್ತೆಯಾಗಿದೆ.

ಓಮನ್ ಮೂಲದ ಮೀನುಗಾರಿಕಾ ಬೋಟ್ ಪತ್ತೆಯಾಗಿದ್ದು, ಇದು ಓಮನ್ ಹಾರ್ಬರ್‌ನಿಂದ ತಪ್ಪಿಸಿಕೊಂಡು ಭಾರತೀಯ ಸಮುದ್ರಕ್ಕೆ ಬಂದಿದ್ದ ಬೋಟ್ ಎಂದು ತಿಳಿದುಬಂದಿದೆ. ಬೋಟ್‌ನಲ್ಲಿ ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದ ತಮಿಳುನಾಡು ಮೂಲದ ತಂಡ ಪತ್ತೆಯಾಗಿದೆ.

ಈ ತಂಡದವರನ್ನು ವೇತನ ಹಾಗೂ ಆಹಾರ ನೀಡದೆ ಓಮನ್ ಬೋಟ್ ಮಾಲೀಕ ಸತಾಯಿಸುತ್ತಿದ್ದ ಎನ್ನಲಾಗಿದೆ. ಮೀನುಗಾರರ ಪಾಸ್‌ಪೋರ್ಟ್ ವಶಕ್ಕೆ ಪಡೆದು ಬೋಟ್ ಮಾಲೀಕ ಚಿತ್ರಹಿಂಸೆ ನೀಡುತ್ತಿದ್ದ. ಜೀವಭಯದಿಂದ, ಓಮನ್ ಹಾರ್ಬರ್‌ನಿಂದ ಮೀನುಗಾರರು ತಪ್ಪಿಸಿಕೊಂಡು ಬಂದಿದ್ದರು. ಸಮುದ್ರ ಮಾರ್ಗದಲ್ಲಿ 4 ಸಾವಿರ ಕಿಲೋ ಕ್ರಮಿಸಿ ಕಾರವಾರ ದಾಟಿ ಮಲ್ಪೆಯತ್ತ ಪ್ರಯಾಣಿಸಿದ್ದರು.

ಈ ಸಂದರ್ಭದಲ್ಲಿ ಡೀಸೆಲ್ ಖಾಲಿಯಾಗಿ ಹಣ, ಆಹಾರವಿಲ್ಲದೆ ಅದರಲ್ಲಿದ್ದವರು ಪರದಾಡಿದ್ದಾರೆ. ಈ ವೇಳೆ ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಸ್ಥಳೀಯ ಮೀನುಗಾರರಿಗೆ ವಿದೇಶಿ ಬೋಟ್ ಪತ್ತೆಯಾಗಿದೆ. ತಕ್ಷಣ ಸ್ಥಳೀಯ ಮೀನುಗಾರರು ಕೋಸ್ಟ್ ಗಾರ್ಡ್ಗೆ ಮಾಹಿತಿ ರವಾನಿಸಿದ್ದಾರೆ.

ಅಮರ್ಥ್ಯ ಕೋಸ್ಟ್ ಗಾರ್ಡ್, ಬೋಟ್ ಹಾಗೂ ಮೀನುಗಾರರನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದೆ. ಪಾಸ್ ಪೋರ್ಟ್ ಇಲ್ಲದೆ ವಿದೇಶಿ ಹಡಗಿನಲ್ಲಿ ಗಡಿ ದಾಟಿದ ಹಿನ್ನಲೆ ಪ್ರಕರಣ ದಾಖಲಿಸಲಾಗಿದೆ.

ಸದ್ಯ ವಿದೇಶಿ ಹಡಗು ಹಾಗೂ ಮೀನುಗಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

error: Content is protected !!