ಸೈಕೋ ವ್ಯಕ್ತಿಯೊಬ್ಬ ಯುವತಿಯೋರ್ವಳಿಗೆ ಪ್ರೀತಿಸುವಂತೆ ಕಿರುಕುಳ ನೀಡಿದ್ದಲ್ಲದೆ ಆಕೆಯ ಕುಟುಂಬಕ್ಕೂ ಕೊಲೆ ಬೆದರಿಕೆ ಹಾಕಿದ ಪರಿಣಾಮ ಯುವತಿ ಸಾವಿಗೆ ಶರಣಾದ ಘಟನೆ ಆಂಧ್ರ ಪ್ರದೇಶದ ಎಲ್ಲೂರು ಜಿಲ್ಲೆಯ ಕಾಮವರಪುಕೋಟ್ ಪಂಚಾಯಿತಿಯ ವಡ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವತಿಯನ್ನು ನಾಗ ದೀಪ್ತಿ (19) ಎಂದು ಗುರುತಿಸಲಾಗಿದೆ. ಈಕೆ ಎಲ್ಲೂರು ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಟೆಕ್ ವಿದ್ಯಾರ್ಥಿನಿಯಾಗಿದ್ದಳು. ಕೆಲವು ತಿಂಗಳುಗಳಿಂದ ನಾಗ ದೀಪ್ತಿ ಕಾಲೇಜಿಗೆ ಬಂದು ಹೋಗುತ್ತಿದ್ದಾಗ, ಕಾಮವರಪುಕೋಟ್‌ನ ಕಿಡಿಗೇಡಿಯೊಬ್ಬ ಪ್ರೀತಿಸುವಂತೆ ಆಕೆಗೆ ಕಿರುಕುಳ ನೀಡುತ್ತಿದ್ದ. ಅಲ್ಲದೆ, ಗ್ಯಾಂಗ್ ಕಟ್ಟಿಕೊಂಡು ಬಂದು, ಪ್ರೀತಿ ಮಾಡದಿದ್ದರೆ, ಇಡೀ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ.
ಈ ವಿಚಾರವನ್ನು ನಾಗ ದೀಪ್ತಿ ತನ್ನ ಅಣ್ಣ ಅರವಿಂದ್‌ಗೆ ತಿಳಿಸಿದ್ದಳು. ಬಳಿಕ ಅರವಿಂದ್, ಕಿಡಿಗೇಡಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ. ಆದರೆ, ಇತ್ತೀಚೆಗೆ ಕಾಮವರಪುಕೊಟ್‌ನಲ್ಲಿ ನಡೆದ ವೀರಭದ್ರಸ್ವಾಮಿ ಹಬ್ಬದ ಸಮಯದಲ್ಲಿ ಅರವಿಂದ್ ಮೇಲೆ ಕಿಡಿಗೇಡಿಗಳ ಗುಂಪು ಹಲ್ಲೆ ಮಾಡಿತ್ತು. ಅಲ್ಲದೆ, ಕಳೆದ ಬುಧವಾರ ಪಾಗಲ್ ಪ್ರೇಮಿ ಮತ್ತೆ ನಾಗದೀಪ್ತಿಗೆ ಕರೆ ಮಾಡಿ, ಪ್ರೀತಿಸದಿದ್ದರೆ ನಿನ್ನ ಅಣ್ಣ ಮತ್ತು ಇಡೀ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಮನನೊಂದ ನಾಗದೀಪ್ತಿ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನಾ ಸಮಯದಲ್ಲಿ ಆಕೆಯ ಅಣ್ಣ ಅರವಿಂದ್ ಕೋಣೆಯಲ್ಲಿ ಮಲಗಿದ್ದ. ನಾಗ ದೀಪ್ತಿಯ ಪೋಷಕರು ಕೃಷಿ ಕೆಲಸಕ್ಕೆಂದು ಹೊಲಕ್ಕೆ ಹೋಗಿದ್ದರು. ನಾಗ ದೀಪ್ತಿ ನೇಣು ಬಿಗಿದುಕೊಂಡಿದ್ದನ್ನು ಗಮನಿಸಿದ ಅರವಿಂದ್, ಹತ್ತಿರದ ಸಂಬಂಧಿಕರ ಸಹಾಯದಿಂದ ಆಕೆಯನ್ನು ಜಂಗಾರೆಡ್ಡಿಗುಡೆಮ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದನು. ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು.
ನಾಗ ದೀಪ್ತಿಯನ್ನು ಕಳೆದುಕೊಂಡ ಇಡೀ ಕುಟುಂಬ ಕಣ್ಣೀರು ಹಾಕುತ್ತಿದ್ದು, ತನ್ನ ಮಗಳ ಸಾವಿಗೆ ಕಾರಣರಾದವರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.