ಪ್ರಯಾಗ್ ರಾಜ್: ಮಹಾ ಕುಂಭ ಮೇಳದ ಸಂದರ್ಭ ಪವಿತ್ರ ನದಿಯಲ್ಲಿ ಮಿಂದರೆ ಜೀವನ ಪಾವನವಾಗುತ್ತದೆ ಎಂದು ದೇಶದ ಮೂಲೆಮೂಲೆಗಳಿಂದ ಜನ ಮಹಾ ಕುಂಭ ಮೇಳಕ್ಕೆ ಹರಿದು ಬರುತ್ತಿದ್ದಾರೆ. ಆದರೆ ಈ ಮಧ್ಯೆ ಮಹಿಳೆಯರಿಗೆ ಅಭದ್ರತೆ ಕಾಡಿದೆ.
ಹೌದು, ಮಹಾ ಕುಂಭ ಮೇಳದಲ್ಲಿ ಮಹಿಳೆಯರ ಸ್ನಾನದ ವಿಡಿಯೊ ಸೆರೆ ಹಿಡಿಯಲಾಗಿದೆ. ಮಹಿಳೆಯರು ಮಿಂದೇಳುವಾಗ, ಅವರು ಬಟ್ಟೆ ಬದಲಿಸುವಾಗ, ಕೆಲವು ಕಿಡಿಗೇಡಿಗಳು ಅವರ ಫೋಟೊ, ವಿಡಿಯೊಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿರುವ ಆರೋಪ ಕೇಳಿ ಬಂದಿದೆ.
ಸ್ಪೈ ಕ್ಯಾಮೆರಾಗಳ ಮೂಲಕ ಇಂತಹ ಫೋಟೊ, ವಿಡಿಯೊಗಳನ್ನು ಚಿತ್ರೀಕರಿಸಿ, ಅವುಗಳನ್ನು ಡಾರ್ಕ್ ವೆಬ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಈ ಸಂಬಂಧ 13 ಎಫ್ಐಆರ್ ಗಳನ್ನು ದಾಖಲಿಸಿಕೊಂಡು, 103 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಪ್ರಯಾಗ್ ರಾಜ್ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಸ್ನಾನಘಟ್ಟಗಳಲ್ಲಿ ಫೋಟೊ, ವಿಡಿಯೊ ಚಿತ್ರೀಕರಿಸುವವರ ಮೇಲೆ ಕಣ್ಣಿಡಲು ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.