ಬೆಳ್ತಂಗಡಿ: ಕುವೆಟ್ಟು ಗ್ರಾಮದ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಫೆ.09ರಿಂದ ಬ್ರಹ್ಮಕುಂಭಾಭಿಷೇಕ ಮತ್ತು ಜಾತ್ರಾಮಹೋತ್ಸವ ನಡೆಯುತ್ತಿದ್ದು ಇಂದು ಕ್ಷೇತ್ರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡಿದರು.
ಬ್ರಹ್ಮಕುಂಭಾಭಿಷೇಕದ ಸ್ವಾಗತ ಸಮಿತಿ ಹಾಗೂ ಬ್ರಹ್ಮಕುಂಭಾಭಿಷೇಕದ ಅಧ್ಯಕ್ಷರಾದ ಶಶಿಧರ ಶೆಟ್ಟಿ ನವಶಕ್ತಿ ಬರೊಡಾ, ಹಾಗೂ ಇನ್ನೂ ಅನೇಕರು ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು. ಬಳಿಕ ಕುಂಭಕಂಠಿಣಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆನುವಂಶೀಯ ಆಡಳಿತ ಮೋಕ್ತೇಸರರಾದ ಸುಕೇಶ್ ಕುಮಾರ್ ಕಡಂಬು ಅವರನ್ನು ಕ್ಷೇತ್ರದ ಪರವಾಗಿ ವಿಶೇಷವಾಗಿ ಗೌರವಿಸಿದರು.
ಕ್ಷೇತ್ರ ಜೀರ್ಣೋದ್ಧಾರಗೊಂಡ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ‘ಬ್ರಹ್ಮಕುಂಭಾಭಿಷೇಕ ನಡೆಸುವ ಮೂಲಕ ಪ್ರಾಚೀನ ದೈವಸ್ಥಾನದ ಕಲೆ ಹೆಚ್ಚಿಸಿದ್ದಾರೆ. ತುಳುವರಿಗೆ ದೈವದ ಮೇಲೆ ನಂಬಿಕೆ ಜಾಸ್ತಿ. ಶಶಿಧರ ಶೆಟ್ಟಿ ನವಶಕ್ತಿ ಬರೊಡಾ ಹಾಗೂ ಸುಕೇಶ್ ಕುಮಾರ್ ಕಡಂಬು ಒಳ್ಳೆಯ ಕೆಲಸ ಮಾಡಿದ್ದಾರೆ. ಕಾರ್ಯಕ್ರಮ ಯಶಸ್ಸಾಗಲಿ’ ಎಂದು ಶುಭಹಾರೈಸಿದರು.ಕ್ಷೇತ್ರಕ್ಕೆ ಆಗಮಿಸಿದ ಹೆಗ್ಗಡೆಯವರಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.ಈ ವೇಳೆ ಬ್ರಹ್ಮಕುಂಭಾಭಿಷೇಕ ಸಮಿತಿಯ. ಕಾರ್ಯಾಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ ಪುರಂದರ ಶೆಟ್ಟಿ,ಕೋಶಾಧಿಕಾರಿ ಪ್ರದೀಪ್ ಶೆಟ್ಟಿ, ಸುನೀಶ್ ಜೈನ್ ಕಡಂಬು, ಉದ್ಯಮಿಗಳಾದ ದಿನೇಶ್ ಶೆಟ್ಟಿ ಪುಣೆ, ಹರೀಶ್ ಶೆಟ್ಟಿ . ರಾಜೇಶ್ ಶೆಟ್ಟಿ ನವಶಕ್ತಿ, ಸಚಿನ್ ಶೆಟ್ಟಿ ಗುರುವಾಯನಕೆರೆ, ಶಶಿರಾಜ್ ಶೆಟ್ಟಿ ಶಕ್ತಿನಗರ , ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.
ಬ್ರಹ್ಮಕುಂಭಾಭಿಷೇಕದ 3ನೇ ದಿನವಾದ ಇಂದು ಚಂಡಿಕಾ ಹೋಮ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮ ನಡೆದಿದ್ದು, ಸಂಜೆ 5:30ರಿಂದ ದೈವದ ಭಂಡಾರ ಬರುವುದು, ಅದಿಕಲಶಪೂರಣೆ, ಪ್ರಧಾನ ಕುಂಭಪೂರಣೆ ಸೇರಿಂದತೆ ಇನ್ನೂ ಹಲವು ಪೂಜಾ ವಿಧಿವಿಧಾನ ನಡೆಯಲಿದೆ.
ರಾತ್ರಿ 7:30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ‘ನೃತ್ಯಾರ್ಪಣಂ’ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆ ಘಟಕದ ವಿದ್ಯಾರ್ಥಿಗಳಿಂದ ‘ರತಿಕಲ್ಯಾಣ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.