ಬಾಗಲಕೋಟೆ: ಮದ್ಯ ಸೇವಿಸಿದ್ದಕ್ಕೆ ಪ್ರೇಯಸಿ ಕೋಪಗೊಂಡಳು ಎಂದು ಪಾಗಲ್ ಪ್ರೇಮಿಯೊಬ್ಬ ಬೇಸರದಲ್ಲಿ ನೇಣಿಗೆ ಶರಣಾದ ಘಟನೆ ಬೀಳಗಿ ತಾಲ್ಲೂಕಿನ ನಿಂಗಾಪುರ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಯುವಕ ಅಜಯ್ (24) ಎಂಬಾತ, ನಾಲ್ಕು ವರ್ಷಗಳಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಅಜಯ್ ತನ್ನ ಪ್ರೇಯಸಿಯೊಂದಿಗೆ, ಸ್ನೇಹಿತ ನವೀನ್ ಅವರ ನಿಂಗಾಪುರ ಗ್ರಾಮಕ್ಕೆ ಬಂದಿದ್ದನು. ಆಗ ಅಜಯ್ ಹಾಗೂ ನವೀನ್ ಊರಲ್ಲಿ ಮದ್ಯ ಸೇವನೆ ಮಾಡಿದ್ದರು. ಇದರಿಂದ ಪ್ರೇಯಸಿ ಕೋಪ ಮಾಡಿಕೊಂಡಿದ್ದಳು. ಅಲ್ಲದೆ ಸಿಟ್ಟಿಗೆದ್ದು ಮನೆಗೆ ಹೊರಡಲು ಮುಂದಾಗಿದ್ದಳು.
ಅಜಯ್ ಸ್ನೇಹಿತ ನವೀನ್ ಬೈಕ್ ನಲ್ಲಿ ಯುವತಿಯನ್ನು ಮನೆಗೆ ಬಿಡಲು ಕರೆದೊಯ್ಯುತ್ತಿದ್ದ ವೇಳೆ ಅಜಯ್ ವಿಡಿಯೊ ಕಾಲ್ ಮಾಡಿದ್ದಾನೆ. ನನ್ನ ಬಿಟ್ಟು ಹೊರಟರೆ ನೇಣು ಹಾಕಿಕೊಂಡು ಸಾಯೋದಾಗಿ ಹೇಳಿದ್ದಾನೆ. ಅವನ ಮಾತು ಕೇಳಿ ಪ್ರೇಯಸಿ ಹಾಗೂ ಸ್ನೇಹಿತ ನವೀನ್ ವಾಪಸ್ ಮನೆಗೆ ಬಂದಿದ್ದು, ಆದರೆ ಅಷ್ಟರಲ್ಲಿ ಅಜಯ್ ನೇಣು ಹಾಕಿಕೊಂಡಿದ್ದಾನೆ.
ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದು ಆದರೆ ಮಾರ್ಗಮಧ್ಯೆ ಅಜಯ್ ಮೃತಪಟ್ಟಿದ್ದಾನೆ. ಗೆಳೆಯನ ಸಾವಿನಲ್ಲಿ ಪ್ರಕರಣದಲ್ಲಿ ತನಗೂ ತೊಂದರೆಯಾಗುತ್ತದೆ ಎಂದು ನವೀನ್, ಸ್ನೇಹಿತನ ಶವ ಹಾಗೂ ಆ ಯುವತಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ.
ಸ್ಥಳಕ್ಕೆ ಬೀಳಗಿ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.